ಫ್ರಾಂಝ್ ಕಾಫ್ಕಾ – ಕಾಯಿದೆಯ ಎದುರು


ಕನ್ನಡಕ್ಕೆ: ಕಮಲಾಕರ ಕಡವೆ

 

ಕಾಯಿದೆಯ ಎದುರು ಒಬ್ಬ ದ್ವಾರಪಾಲಕ. ಅವನ ಎದುರು ಒಬ್ಬ ಹಳ್ಳಿಮನಷ ಬರುತ್ತಾನೆ ಮತ್ತು ಕಾಯಿದೆಯ ಎದುರು ಹೋಗಲು ಅನುಮತಿ ಬೇಡುತ್ತಾನೆ. ಆದರೆ ದ್ವಾರಪಾಲಕ ತತ್ ಕ್ಷಣ ಒಳಹೋಗಲು ಅನುಮತಿ ನೀಡಲಾಗದು ಅನ್ನುತ್ತಾನೆ. ಆ ಹಳ್ಳಿಮನಷ ಕೊಂಚ ಯೋಚಿಸಿ, ಆ ಮೇಲೆ ಒಳಹೋಗಲಾದೀತೆ ಎಂದು ವಿಚಾರಿಸುತ್ತಾನೆ. “ಆದೀತು, ಆದರೆ ಈಗಲ್ಲ”, ಅನ್ನುತ್ತಾನೆ ದ್ವಾರಪಾಲಕ. ಬಾಗಿಲು ಎಂದಿನಂತೆ ತೆರೆದೇ ಇದ್ದದ್ದರಿಂದ, ದ್ವಾರಪಾಲಕ ಪಕ್ಕಕ್ಕೆ ಸರಿದಂತೇ, ಆ ಹಳ್ಳಿಮನಷ ಬಗ್ಗಿ ಒಳಗಿನತ್ತ ನೋಡುತ್ತಾನೆ. ಇದನ್ನು ಗಮನಿಸಿದ ದ್ವಾರಪಾಲಕ, ನಕ್ಕು ಅವನಿಗೆ ಹೇಳುತ್ತಾನೆ, “ನಿನಗೆ ಹಾಗನ್ನಿಸಿದರೆ ನನ್ನ ಮಾತಿಗೆ ಪ್ರತಿಯಾಗಿ ಒಳಹೋಗಲು ಪ್ರಯತ್ನ ಮಾಡು. ಆದರೆ ನೆನಪಿರಲಿ, ನಾನು ಬಲಿಷ್ಠನಿದ್ದೇನೆ. ಮತ್ತು ನಾನು ದ್ವಾರಪಾಲಕರುಗಳಲ್ಲೆಲ್ಲಾ ಅತಿ ಸಣ್ಣಗಿನವ. ಕೋಣೆಯಿಂದ ಕೋಣೆಗೆ ದ್ವಾರಪಾಲಕರು ಎದುರಾಗುತ್ತಾರೆ ಮತ್ತು ಒಬ್ಬೊಬ್ಬರೂ ಮೊದಲಿನವರಿಗಿಂತ ಹೆಚ್ಚು ಬಲಿಷ್ಠರು. ಮೂರನೇ ದ್ವಾರಪಾಲಕನವರೆಗೆ ತಲುಪಿದರೂ ಸಾಕು, ಆತ ಎಷ್ಟು ಭಯಾನಕನಿದ್ದಾನೆ ಎಂದರೆ, ನಾನೂ ಸಹ ಅವನನ್ನು ಕಣ್ಣೆತ್ತಿ ನೋಡಲು ಹೆದರುತ್ತೇನೆ.” ಈ ಬಗೆಯ ತಡೆಗಳನ್ನು ಹಳ್ಳಿಮನಷ ಎಣಿಸಿರಲಿಲ್ಲ; ಕಾಯಿದೆ ಎಲ್ಲರಿಗೂ ಎಂದಿಗೂ ಎಟಕುವಂತಿರಬೇಕಲ್ಲವೇ ಎಂದುಕೊಳ್ಳುತ್ತಾನೆ ಆತ, ಆದರೆ ಈಗ ಕಡಕ್ಕು ಕೋಟು ತೊಟ್ಟು ಕೂತಿರುವ ಆ ದ್ವಾರಪಾಲಕನನ್ನ ಹತ್ತಿರದಿಂದ ನೋಡಿದಂತೆ, ಅವನ ಉದ್ದನ ಚೂಪು ಮೂಗು ಮತ್ತು ತೆಳ್ಳನ ಕಪ್ಪನೆಯ ನೀಳ ಗಡ್ಡವನ್ನು ನೋಡಿದಂತೆ, ಅನುಮತಿ ಸಿಗುವವರೆಗೆ ಕಾಯುವುದೇ ಲೇಸು ಎಂದು ನಿರ್ಧರಿಸುತ್ತಾನೆ. ದ್ವಾರಪಾಲಕ ಅವನಿಗೆ ಒಂದು ಕುರ್ಚಿ ಕೊಟ್ಟು ಬಾಗಿಲ ಬದಿಯಲ್ಲಿ ಕೂರಗೊಡುತ್ತಾನೆ. ಅಲ್ಲಿ ಅವನು ದಿನಾನುದಿನ ವರ್ಷಗಳಕಾಲ ಕೂತಿರುತ್ತಾನೆ. ಬಹಳ ಸಲ ಅವನು ಒಳಹೋಗಲು ಪ್ರಯತ್ನ ಮಾಡುತ್ತಾನೆ, ದ್ವಾರಪಾಲಕನಿಗೆ ಬೇಡಿ ಬೇಡಿ ಕಾಡುತ್ತಾನೆ. ಅವನೊಡನೆ ಆಗೀಗ ದ್ವಾರಪಾಲಕ ಚಿಕ್ಕಪುಟ್ಟ ಸಂಭಾಷಣೆ ನಡೆಸುತ್ತಾನೆ, ಅವನ ಮನೆ ಮತ್ತಿತರ ವಿಷಯ ವಿಚಾರಿಸುತ್ತಾನೆ. ಆದರೆ ಯಾವಾಗಲೂ ಅವು ನಿರಾಸಕ್ತ ಪ್ರಶ್ನೆಗಳಾಗಿರುತ್ತವೆ, ದೊಡ್ಡ ದೊಡ್ಡ ಸಾಹೇಬರುಗಳು ಕೇಳುವಂತೆ ಮತ್ತು ಯಾವಾಗಲೂ ಅವು ಒಳಹೋಗಲು ಅನುಮತಿ ಇಲ್ಲ ಅನ್ನುವಲ್ಲಿ ಕೊನೆಯಾಗುತ್ತವೆ. ಹಳ್ಳಿಮನಷ ತಾನು ಪ್ರಯಾಣನಿಮಿತ್ತ ಜತೆಗೆ ತಂದ ಏನೆಲ್ಲವನ್ನೂ ತ್ಯಾಗಮಾಡಿ ದ್ವಾರಪಾಲಕನಿಗೆ ಲಂಚವಾಗಿ ಕೊಡುತ್ತಾನೆ. ಪ್ರತಿ ಸಲವೂ ದ್ವಾರಪಾಲಕ ಅವುಗಳನ್ನು ಸ್ವೀಕರಿಸುತ್ತ ಹೇಳುತ್ತಾನೆ, “ಇವನ್ನೆಲ್ಲ ನಾನು ತೆಗೆದುಕೊಳ್ಳುತ್ತಿರುವುದೇಕೆಂದರೆ ನಿನಗೆ ಎಲ್ಲವನ್ನೂ ಮಾಡಿದ ತೃಪ್ತಿ ಇರಲಿ ಎನ್ನುವ ಮಾತ್ರಕ್ಕೆ.” ಎಷ್ಟೋ ವರ್ಷಗಳವರೆಗೆ ಸತತವಾಗಿ ಆ ಹಳ್ಳಿಮನಷ ದ್ವಾರಪಾಲಕನ ಮೇಲೆ ತನ್ನ ನೋಟ ನೆಡುತ್ತಾನೆ. ಅವನು ಇತರ ದ್ವಾರಪಾಲಕರನ್ನು ಮರೆಯುತ್ತಾನೆ, ಈ ಮೊದಲಿನವನೇ ಆತನಿಗೆ ಕಾಯಿದೆಯನ್ನು ತಲುಪಲು ತನಗಿರುವ ಏಕಾಕಿ ಕಂಟಕವಾಗಿ ಕಾಣುತ್ತಾನೆ. ಅವನು ತನ್ನ ದುರಾದೃಷ್ಟವನ್ನು ಹಳಿಯುತ್ತಾನೆ, ಮೊದಮೊದಲ ವರ್ಷಗಳಲ್ಲಿ ದೊಡ್ಡ ದನಿಯಲ್ಲಿ, ಆದರೆ ವಯಸ್ಸಾದಂತೆ ಒಳಗೊಳಗೇ ವಟವಟಗುಟ್ಟುತ್ತಾನೆ. ಮಕ್ಕಳಂತ್ತಾಡತೊಡಗುತ್ತಾನೆ. ಮತ್ತು, ದ್ವಾರಪಾಲಕನನ್ನು ಇಷ್ಟೆಲ್ಲ ವರ್ಷಗಳವರೆಗೆ ಸತತ ಧ್ಯಾನವಿಟ್ಟು ಕಾಣುತ್ತ ಕುಳಿತಿರುವ ಅವನಿಗೆ, ದ್ವಾರಪಾಲಕನ ಕೋಟಿನ ಕಾಲರಿನ ಮೇಲೆ ಕುಳಿತ ಹೇನು ಕೂಡ ಪರಿಚಯವಾಗಿಬಿಟ್ಟಿರುವುದರಿಂದ, ಆ ಹೇನುಗಳಿಗೂ ಮೊರೆ ಇಡುತ್ತಾನೆ ದ್ವಾರಪಾಲಕನ ಮನಪರಿವರ್ತನೆಗೆ ಬೇಡಿಕೊಂಡು. ಹೀಗೇ ಕಾಲ ಸರಿದು ಅವನ ದೃಷ್ಟಿಯೂ ಮಂಜಾಗತೊಡಗುತ್ತದೆ. ಅವನಿಗೆ ಜಗವೇ ಕರಾಳವಾಗುತ್ತಿದೆಯೇ ಅಥವಾ ತನ್ನ ಕಣ್ಣುಗಳೇ ಮೋಸಮಾಡುತ್ತಿವೆಯೇ ಅರಿವಿಗೆ ಬರುವುದಿಲ್ಲ. ಹಾಗಿದ್ದೂ ಅಂಧಕಾರದಲ್ಲಿ ಮುಳುಗಿದ್ದಾತನಿಗೆ ಸದಾ ತೆರೆದಿರುತ್ತಿದ್ದ ಕಾಯಿದೆಯ ಬಾಗಿಲೆಡೆಯಿಂದ ಎಡೆಬಿಡದೇ ಸೂಸುತ್ತಿರುವ ಪ್ರಭೆಯೊಂದು ಅರಿವಿಗೆ ಬರುತ್ತದೆ. ವಯಸ್ಸು ತುಂಬಿಬಂದಿರುವ ಅವನಿಗಿನ್ನು ಹೆಚ್ಚು ಬಾಳು ಉಳಿದಿಲ್ಲ.  ಸಾಯುವ ಮೊದಲು, ಅವನ ಈವರೆಗಿನ ಎಲ್ಲ ಕಟು ಅನುಭವಗಳೂ ಒಟ್ಟಾಗಿ ಅವನ ಒಳಗಿನಿಂದ ಇಲ್ಲಿಯವರೆಗೆಂದೆಂದೂ ಕೇಳಿರದ ಒಂದು ಪ್ರಶ್ನೆಯನ್ನು ಎತ್ತುತ್ತವೆ. ಸ್ವತಃ ಏಳಲೂ ಆಗದ ಸ್ಥಿತಿಯಲ್ಲಿರುವ ಅವನು ಕೈಬೀಸಿ ದ್ವಾರಪಾಲಕನನ್ನು ಬಳಿಗೆ ಕರೆಯುತ್ತಾನೆ. ಹಳ್ಳಿಮನಷನ ಆಕೃತಿಯೂ ಕುಬ್ಜವಾಗಿಬಿಟ್ಟಿರುವುದರಿಂದ ಅವನ ಮಾತನ್ನು ಕೇಳಲು ದ್ವಾರಪಾಲಕ ಬಗ್ಗಬೇಕಾಗುತ್ತದೆ. “ಈಗೇನು ಕೇಳಬೇಕಾಗಿ ಬಂದಿದೆ ನಿನಗೆ”, ದ್ವಾರಪಾಲಕ ಸಿಡಿಮಿಡಿ ಮಾಡುತ್ತಾನೆ, “ಸಮಾಧಾನವೇ ಇಲ್ಲವಲ್ಲ ನಿನಗೆ”. “ಎಲ್ಲರಿಗೂ ಕಾಯಿದೆಯ ಫಾಯಿದೆ ಬೇಕಾಗಿಯೇ ಇರುತ್ತದಾದರೂ, ಇಷ್ಟೆಲ್ಲ ವರ್ಷಗಳಲ್ಲಿ ನನ್ನನುಳಿದು ಬೇರೆ ಯಾರೂ ಕೂಡ ಒಳಹೋಗಲೆಂದು ಬೇಡಿಕೊಂಡು ಈ ಬಾಗಿಲ ಬಳಿ ಬರಲಿಲ್ಲವಲ್ಲ, ಯಾಕೆ?” ಎಂದು ಕೇಳುತ್ತಾನೆ ಆ ಹಳ್ಳಿಮನಷ. ಅವನ ಕೊನೆ ಘಳಿಗೆ ಬಂದಿರುವುದನ್ನ ಅರಿತ ದ್ವಾರಪಾಲಕ, ಇಂದ್ರಿಯಗಳೆಲ್ಲ ಜಡವಾಗುತ್ತಿರುವ ಅವನ ಕಿವಿಯ ಬಳಿ ಜೋರಾಗಿ ಕಿರುಚುತ್ತಾನೆ, “ಬೇರೆ ಯಾರೂ ಈ ಬಾಗಿಲ ಮೂಲಕ ಒಳಹೋಗುವಂತಿರಲಿಲ್ಲ, ಏಕೆಂದರೆ ಇದು ನಿನಗೊಬ್ಬನಿಗಾಗಿಯೇ ಮಾಡಿದ್ದ ಬಾಗಿಲಾಗಿತ್ತು. ಇನ್ನು ನಾನು ಈ ಬಾಗಿಲನ್ನು ಮುಚ್ಚುತ್ತೇನೆ”.

 

ಗೆಬ್ರಿಯೆಲಾ ಮಿಸ್ಟ್ರೆಲ್ ಕವಿತೆ: ಪುಟ್ಟ ಪಾದಗಳು

ಪುಟ್ಟ ಪಾದಗಳು

ಮಗುವೊಂದರ ಪುಟ್ಟ ಪಾದಗಳು

ನೀಲಿ,

ಥಂಡಯಿಂದ ನೀಲಿಯಾಗಿವೆ;

ಹೇಗವರು ನೋಡಿಯೂ ನಿರ್ಲಕ್ಷದಿಂದ ನಡೆದಿದ್ದಾರೆ

ಓ! ದೇವರೇ.

ಕಲ್ಲು ಹರಳುಗಳಿಂದ ಎಲ್ಲೆಡೆ ಚುಚ್ಚಿಸಕೊಂಡ

ಪುಟಾಣಿ ಗಾಯಾಳು ಪಾದಗಳು

ಹಿಮ ಹಾಗೂ ಕೆಸರು ಸೇರಿ ನೋವಿಗೀಡಾಗಿವೆ

ಮನುಷ ತನ್ನ ಕುರುಡುತನದಲ್ಲಿ ಕಾಣದಾಗಿದ್ದಾನೆ

ನೀನು ಕಾಲೂರದಲ್ಲಿ ಅರಳುವ

ಬೆಳಕಿನ ಉಜ್ವಲ ಹೂಗುಚ್ಚಗಳನ್ನು;

ನಿನ್ನ ರಕ್ತಸೂಸುವ ಪಾದಬಿದ್ದಲ್ಲಿ

ಬೆಳೆಯುವ ಸುಗಂಧಿತ ಗೆಡ್ಡೆಹೂವುಗಳನ್ನು

ನೀನು ಹೇಗೋ ಬೀದಿಯಲ್ಲಿ

ನೇರವಾಗಿಯೇ ನಡೆಯುವೆ, ಮಗುವೇ

ದೋಷರಹಿತ ಧೈರ್ಯಶಾಲಿ

ಮಗುವಿನ ಪುಟಾಣಿ ಪಾದಗಳು

ನರಳಿರುವ ಸಣ್ಣ ಸಣ್ಣ ರತ್ನದ್ವಯಗಳು

ಅದು ಹೇಗೆ ಜನರು ಸಾಗಿದ್ದಾರೆ ಕಣ್ಣಿಗೇ ಹಾಕಿಕೊಳ್ಳದೇ!

ವಿಲಿಯಂ ಶೇಕ್ಸ್ ಪಿಯರ್ – ಸಹಮನಸ್ಕರ ಮದುವೆಗೆ ಅಡಚಣೆಯ ತರಲಾರೆ

ಸಹಮನಸ್ಕರ ಮದುವೆಗೆ ಅಡಚಣೆಯ ತರಲಾರೆ

ವಿಲಿಯಂ ಶೇಕ್ಸ್ ಪಿಯರ್ (ಸುನೀತ ೧೧೬)

ಸಹಮನಸ್ಕರ ಮದುವೆಗೆ ತಡೆಯ ತರಲಾರೆ
ನಾನು. ಪ್ರೀತಿಯದು ಪ್ರೀತಿಯಲ್ಲ ಕಂಡಂತೆ
ಬದಲಾದ ಪರಿಸರವ ತಾನೂ ಬದಲುತ್ತಲಿರೆ,
ಅಥವಾ ಪ್ರೇಮಿ ನಿಲುವಲ್ಲಿ ಪಲ್ಟಿಯಾದಂತೆ:

ಇಲ್ಲವೇ ಇಲ್ಲ! ಅದೊಂದು ಸದಾಸ್ಥಿರ ಚಿನ್ಹೆ
ಬಿರುಗಾಳಿಯೆದುರಿಗೂ ಕಂಪಿಸದಿರುವುದು.
ಅಲೆವ ನಾವೆಗಳಿಗೆಲ್ಲ ಅದುವೆ ಸ್ಥಾಯಿ ಚುಕ್ಕೆ
ದೂರವರಿತರೂ ಅದರ ಬೆಲೆಯರಿಯದಂತದ್ದು

ಪ್ರೀತಿಯಲ್ಲ ಕಾಲದ ಗುಲಾಮ, ಸುಂದರಾಂಗಗಳು
ಇದ್ದಾವೆ ಅವನ ಡೊಂಕು ಕುಡುಗೋಲಿನ ಅಂಕೆಯಲಿ
ಪ್ರೀತಿಯ ಬದಲಿಸದು ಅವನ ಕ್ಷಣಿಕ ತಾಸು ವಾರಗಳು
ನಾಶದಂಚಿನವರೆಗೂ ತಾಳುವುದು ಕೆಚ್ಚಿನಲಿ.

ರುಜುಮಾಡಿ ತೋರಿದರೆ ನನ್ನೀ ಮಾತು ತರವಲ್ಲ
ನಾನು ಕವಿಯೇ ಅಲ್ಲ, ಪ್ರೇಮಿಯೂ ಎಲ್ಲಿಲ್ಲ.

ಶೇಕ್ಸಪಿಯರನ ಬಹುಚರ್ಚಿತ ಸುನೀತಗಳಲ್ಲಿ ಇದು ಒಂದು. ಇಲ್ಲಿ ಆತ ನಿಜವಾದ ಪ್ರೀತಿ ಹೇಗೆ ಎಂದಿಗೂ ಬದಲದೇ, ದೃವತಾರೆಯಂತೇ ಸ್ಥಿರವಾಗಿಯೂ, ಹಾಗೂ ಅದರಂತೆ ದಿಕ್ಕ್ಸೂಚಿಯಾಗಿಯೂ ಇರುತ್ತದೆ ಎಂದು ವಾದಿಸುತ್ತಾನೆ. ಯುರೋಪಿನ ನವೋದಯ (renaissance) ಕಾಲದ ಆದರ್ಶವಾದೀ ಕಲ್ಪನೆಗಳ ಮಾದರಿಯಲ್ಲಿ ಇದೊಂದು ಉದಾಹರಣೆ. ಇಲ್ಲಿ ನಾವು ಆದರ್ಶವಾದದೊಂದಿಗೆ ಕಾಣುವ ಇನ್ನೊಂದು ಅಂಶವೆಂದರೆ ವಿಚಾರವೊಂದನ್ನು ಎತ್ತಿಕೊಂಡು ವಾದಿಸುತ್ತ ಹೋಗುವ ತಾರ್ಕಿಕ ಧಾಟಿ. ಹಾಗೆಯೇ ಅಂತ್ಯದಲ್ಲಿ ಬರುವ ನಾನು ಕವಿಯೇ ಅಲ್ಲ ಅನ್ನುವ ಮಾತು (i never writ) ಸೂಚಿಸುವಂತೆ ವ್ಯಕ್ತಿಯೊಬ್ಬನ ವಿಚಾರವೂ ಮುಖ್ಯ ಎಂಬ ವಿಶ್ವಾಸ. ಇವೆರಡನ್ನೂ ಯುರೋಪಿನ ನವೋದಯದ ಗುರುತಾಗಿ ಕಾಣುವುದು ವಾಡಿಕೆ. ಹೀಗೆ ಕಾವ್ಯದಲ್ಲಿ ತಾರ್ಕಿಕವಾಗಿ ವಾದಿಸುವ ಶೈಲಿ ಮುಂದೆ metaphysical ಕಾವ್ಯಕ್ಕೆ ದಾರಿ ಮಾಡುತ್ತದೆ; ಅಲ್ಲಿ ಇದು ಅತಿಯೆನ್ನುವ ಮಟ್ಟಿಗೆ ತಲುಪಿ ಶಬ್ದದೊಂದಿಗಿನ ಜಾಣ್ಮೆಯನ್ನು ತೋರುವ ಕವನಗಳೇ ಹೆಚ್ಚಾಗಿ ಬರೆಯಲಾಯಿತು.ಇಲ್ಲಿ, ಶೇಕ್ಸಪಿಯರ ಸಿನಿಕತನವನ್ನು ತೊರೆದ ಒಂದು ಆದರ್ಶ ಪ್ರೀತಿಯನ್ನು ಹೊಗಳುತ್ತಾನೆ. ಇಲ್ಲಿ ಮೊದಲ ಸಾಲಲ್ಲಿ ಬರುವ ‘ತಡೆ ತರುವ ವಿಚಾರ’ ಕ್ರಿಶ್ಚಿಯನ ಮದುವೆಗಳಲ್ಲಿ ಗಂಡು – ಹೆಣ್ಣು ದಂಪತಿಗಳೆಂದು ಸಾರುವ ಮೊದಲು ಯಾರಾದರೂ ಅವರು ದಂಪತಿಗಳಾಗಬಾರದು ಎಂದು ತಡೆ ತರಬಹುದಾದ ಆಚರಣೆ ಕುರಿತಾಗಿದೆ. ಆದರೆ ಇಲ್ಲಿ ‘ಮದುವೆ’ ಶಬ್ದ ಸೀಮಿತವಾದದ್ದಲ್ಲ. ಅದನ್ನು ಮಿಲನವೆಂದು ಕೂಡ ಅರ್ಥಿಸಿಕೊಳ್ಳಬಹುದಾಗಿದೆ. ಸಹಮನಸ್ಕರು (‘True minds’) ಕೂಡ ಪ್ರೇಮಿಗಳಿಗೆ ಉಪಯೋಗಿಸುವ ಸಾಮಾನ್ಯ ಶಬ್ದವಾಗದೇ, ಯಾರು ನಿಜವಾಗಿಯೂ ಪ್ರೇಮಿಸುವ ಯೋಗ್ಯತೆಯುಳ್ಳವರೋ ಅವರ ಕುರಿತಾಗಿದೆ. ಅಂದರೆ, ನಿಜ ಪ್ರೀತಿ ಎನ್ನುವುದನ್ನು ಮಾನಸಿಕ ಅವಸ್ಥೆಯ ಜತೆ ಜೋಡಿಸಿ, ಕವಿ ಪ್ರೀತಿಯಲ್ಲಿ ವೈಚಾರಿಕತೆಯ ಜರೂರಿಯನ್ನು ಸೂಚಿಸುತ್ತಾನೆ. ಹಾಗಾಗಿ, ನಾವು ಸಾಮಾನ್ಯವಾಗಿ ಶೇಕ್ಸಪಿಯರನನ್ನು ರಮ್ಯಕವಿಯಾಗಿ ಕಂಡರೂ, ಅವನಲ್ಲಿಯೂ ವೈಚಾರಿಕತೆಗಿದ್ದ ಒಲವು ಕಾಣಬಹುದಾಗಿದೆ. ಇದನ್ನು ಅನುವಾದ ಮಾಡುತ್ತ ನನ್ನ ಮನಸ್ಸಿನಲ್ಲಿ ಇದ್ದ ವಿಚಾರವೆಂದರೆ ಅನುವಾದಿತ ಕವನವು ಕನ್ನಡದ ಕವನವೆಂದೇ ತೋರುವಂತಾಗಬಾರದು ಎಂದು. ಅನುವಾದದ ಕುರಿತಾಗಿ ಇರುವ ಅನೇಕ ಭಿನ್ನಾಭಿಪ್ರಾಯಗಳಲ್ಲಿ ಇದು ಒಂದು: ಅನುವಾದ ಗುರಿ ಭಾಷೆಯಲ್ಲಿ ಒಂದಾಗಬೇಕೆಂಬುದಾಗಿ, ಯಾ ಮೂಲ ಭಾಷೆ ಬೇರೆ ಎಂಬುದನ್ನು ಓದುಗರಿಗೆ ಸದಾ ನೆನಪಿಸುತ್ತಲಿರಬೇಕೆಂಬುದಾಗಿ. ಹಾಗಾಗಿ ಇಂಗ್ಲೀಷಿನ ಸಾನೆಟ್ ಗೆ ಕನ್ನಡದಲ್ಲಿ ಸುನೀತವೆನ್ನುವುದು ಕೂಡ ಸರಿಯಲ್ಲವೇನೋ ಎಂದು ಕೆಲ ಬಾರಿ ಅನಿಸುತ್ತದೆ. ನನ್ನ ಈ ಅನುವಾದ ಒಂದು ಕಚ್ಚಾ ಪ್ರಯೋಗವಷ್ಟೇ. ಇದನ್ನು ಇತರರೂ ಕೂಡ ಅನುವಾದಿಸಿರಬಹುದು ಈ ಮೊದಲೇ. ನಾನು ಹುಡುಕಿ ನೋಡುವುದು ಬಾಕಿಯಿದೆ.

ಶೇಕ್ಸಪಿಯರ – ಆತ್ಮ, ಪಾಪಿ ಭೂಮಿಯ ಕೇಂದ್ರ

ಆತ್ಮ, ಪಾಪಿ ಭೂಮಿಯ ಕೇಂದ್ರ
ಶೇಕ್ಸಪಿಯರ

ಪಾಪ, ಆತ್ಮ, ನನ್ನ ಈ ಪಾಪಿ ನೆಲದ ಕೇಂದ್ರವೆ
ಯಾಕೆ ಹೂತಿರುವೆ ಈ ಬಂಡುಕೋರರ ನಡುವಲ್ಲಿ
ಯಾಕೆ ಒಳಗೊಳಗೇ ಸೊರಗುವೆ, ಕೊರಗ ಸಹಿಸುವೆ
ಹೊರಗೋಡೆಗಳನು ಸಿಂಗರಿಸಿ ಅದ್ದೂರಿ ಬಣ್ಣದಲಿ?

ಯಾಕಿಷ್ಟು ಧಾರಾಳ ಕಾಸು ಇಷ್ಟು ತುಸುಗಾಲಕ್ಕೆ
ಪಡೆದ ಈ ಮಂಕು ಮಹಲಿಗಾಗಿ ಹೀಗೆ ವ್ಯಯಿಸುವುದು?
ಹುಳುಗಳೇ ನಾಳೆ ವಾರಸುದಾರರು ನಿನ್ನೀ ವೈಭವಕ್ಕೆ
ತಿನ್ನವೇನು ಅದನು? ಹೀಗೇ ತಾನೆ ದೇಹ ಕೊನೆಯಗುವುದು?

ಕಾರಣ ಆತ್ಮವೇ, ಬಾಳು, ಹೇರಿ ಎಲ್ಲ ನಷ್ಟ ಆಳಿನ ಮೇಲೆ
ಸವೆಯುತ್ತ ಆತ ನಿನ್ನ ಗೋದಾಮನ್ನು ಕೊಬ್ಬಿಸುವ
ಕೊಳ್ಳು ದೈವಿಕ ಮುದ್ದತು, ಮಾರಿ ಗಂಟೆಗಟ್ಟಳೆ ಕೊಳೆ
ಪೋಷಿಸು ಅಂತರಂಗವ, ಇನ್ನಿರದಂತೆ ಹೊರ ವೈಭವ;

ಮಾನವರ ಸೇವಿಸುವ ಆ ಸಾವನ್ನೇ ಸೇವಿಸುವಂತೆ
ಸಾವು ಬಂದರೆ ಒಮ್ಮೆ ಮತ್ತೆ ಸಾವೆಂದೂ ಬರದಂತೆ

ಶೇಕ್ಸಪಿಯರನ ೧೪೬ನೇ ಸುನೀತ ದೇಹ ಹಾಗೂ ಆತ್ಮದ ಕುರಿತಿದ್ದು, ಭೌತಿಕವನ್ನು ತಿರಸ್ಕರಿಸಿ ಆಧ್ಯಾತ್ಮಿಕವನ್ನು ಅಪ್ಪುಕೊಳ್ಳುವ ತರ್ಕವನ್ನು ಆತ್ಮಕ್ಕೆ ಸಂಭೋಧಿಸಿ ಪ್ರಸ್ತುತಪಡಿಸುತ್ತದೆ. ಇಲ್ಲಿ ಬರುವ ವಿಷಯ ಕಾವ್ಯ ವಸ್ತುವಾಗಿ ಹೊಸದಲ್ಲ (ಹಾಗೆ ನೋಡಿದರೆ ಶೇಕ್ಸಪಿಯರ ಹೊಸವಸ್ತುವಿನ ಹುಡುಕಾಟ ಮಾಡುವಾತನೇ ಅಲ್ಲ). ಇದೊಂದು ಚರ್ವಿತ ಚರ್ವಣ ವಸ್ತು ಹಾಗೂ ವಾದ. ದೇಹ ಕ್ಷಣಿಕ, ಆತ್ಮ ಸಾರ್ವಕಾಲಿಕ ಎಂಬುದೇ ಇಲ್ಲಿಯ ತಥ್ಯ. ಎಂದಿನಂತೇ ಇಲ್ಲಿ ತಥ್ಯದ ಸ್ತರದಲ್ಲಿ ಕಾಣದ ಜಾಣ್ಮೆ ಕಾವ್ಯಬಂಧದಲ್ಲಿ ಕಾಣುತ್ತದೆ. ಇಲ್ಲಿನ ರೂಪಕಗಳು ಮುಖ್ಯವಾಗಿ ವಾಣಿಜ್ಯ ವಲಯದಿಂದ ಬಂದಿದೆ ಎನ್ನುವುದು ಗಮನಾರ್ಹ. ಅಂದರೆ, ಭೌತಿಕ ಜೀವನ ಕ್ಷುಲ್ಲಕ ವೆನ್ನುವ ಮಾತೆಲ್ಲವೂ ಅಲಂಕೃತವಾಗಿವೆ, ಅದೂ ಕೂಡ ಕೊಡುಕೊಳ್ಳುವಿಕೆಯ ರೂಪಕಗಳಲ್ಲಿ. ಹಾಗಾಗಿ ಈ ಸುನೀತದಲ್ಲಿ ಬರುವ ರೂಪಕಗಳ ನುಗ್ಗಾಟವಿರುವುದು ಹಣಕ್ಕೆ ಸಂಬಂಧಿಸಿದ ಅಂದರೆ ಭೌತಿಕ ಜೀವನದ ಅಗತ್ಯಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ. ಹೇಳುತ್ತಿರುವ ಮಾತು ಅದರ ತದ್ವಿರುದ್ಧ ದಿಕ್ಕಿನಲ್ಲಿ. ಹೀಗೆ ಪರಸ್ಪರ ವಿರೋಧಿ ವಸ್ತುವನ್ನು ಆಯ್ದುಕೊಂಡು ಕವಿ ದ್ವಂದ್ವ ತುಳುಕುವ ಶೈಲಿಯಲ್ಲಿ ತನ್ನ ಕವನವನ್ನು ಹೆಣೆದಾಗ ಕಾಣಬರುವ ಸೊಬಗೆಂದರೆ ಭಾಷೆಯ ಸ್ತರದಲ್ಲಿಯೇ ಇಂಥಹ ವೈರುಧ್ಯಗಳನ್ನು ಲೇವಡಿ ಮಾಡಿಬಿಡುವ ತುಂಟತನ. ಅದೆಷ್ಟೋ ವರ್ಷಗಳಿಂದ ಓದುಗರು ಈ ಸುನೀತವನ್ನು ಆತ್ಮದ ಹೆಚ್ಚುಗಾರಿಕೆಯ ಕುರಿತಾದ್ದು ಎಂದು ಪರಿಗಣಿಸಿ ಓದುತ್ತಿದ್ದಾರೆ. ಆದರೆ, ಆ ತುಂಟ ಕವಿ ನಗುತ್ತಾನೆ: ದೇಹ ಹೆಚ್ಚೋ, ಆತ್ಮ ಹೆಚ್ಚೋ ಎನ್ನುವ ನುಗ್ಗಾಟ ನಡೆಸಿ ನೀವು; ನಾನು ಮಾತ್ರ ಇಂಥಹ ದ್ವಂದ್ವಗಳ ಕಿರುಕುಳ ಬಗ್ಗೆ ಉಪಹಾಸ ಮಾಡಿಬಿಡುವೆ!

ಜಯಂತ ಮಹಾಪಾತ್ರ – ಹಸಿವು

ದೇಹದಾಹದ ಸೆಳವು ನನ್ನಲ್ಲಿ ಇಷ್ಟೆಂದು ನಂಬಲಾರೆ;
ಮೀನುಗಾರನೆಂದ ಅಸಡ್ಡೆಯಿಂದ: ಬೇಕಾ ನಿನಗೆ ಅವಳು.
ನರಜಾಲದಂತೆ ಅವನ ಹಿಂದೆಳೆವ ಬಲೆ; ಶಬ್ದಗಳೇ
ತನ್ನ ಉಳಿವಿನ ಇರಾದೆ ಪೂಜ್ಯಗೊಳಿಸಿತೆಂಬಂತಿದ್ದ ಅವನು.
ಕಣ್ಣೊಳಗೆ ಬಿಳಿಯೆಲುಬು ತೊನೆಯುವುದ ಕಂಡೆ.

ವಿಶಾಲ ಮರಳುದಿನ್ನೆಗುಂಟ ಅವನ ಹಿಂದೆ ನಡೆದೆ,
ಮನಸು ಮಾಂಸದ ಕವಣೆಯೊಳಗೆ ಗುದ್ದಾಡುತ್ತಲಿತ್ತು.
ನಾನಿರುವ ಮನೆಯ ಸುಡುವುದೊಂದೇ ಉಳಿದ ನಿರೀಕ್ಷೆಯಾಗಿತ್ತು.

ನನ್ನ ತೋಳುಗಳಗುಂಟ ಮೌನ; ಅವನ ದೇಹ ಸಮುದ್ರದಿಂದ
ಬಲೆಯೊಳಗೆ ಹಿಡಿದುತಂದ ನೊರೆಗಳನ್ನು ಪರಚುತ್ತಿತ್ತು.
ಮಿಣುಕು ಬೆಳಕಲ್ಲಿ ಗಾಯದಂತೆ ಅವನ ಬಿಡಾರ ತೆರೆದುಕೊಂಡಿತು.
ನಾನೇ ಗಾಳಿ ಒಳಗೆ, ಹಾಗೂ ಮುಂಚಿನ ದಿನಗಳು ರಾತ್ರಿಗಳು.
ಸೋಗೆ ತೊಗಲನ್ನು ಸೋಕಿದವು. ಬಿಡಾರದೊಳಗೆ
ಎಣ್ಣೆಬತ್ತಿಯೊಂದು ಗೋಡೆಯ ಮೇಲೆ ತಾಸುಗಳನ್ನು ಕಿಸಿದಿತ್ತು.
ಮತ್ತೆ ಮತ್ತೆ ಜಿಗುಟು ಮಸಿ ಮನಸಿನವಕಾಶವ ತುಂಬಿತ್ತು.
ಅವನು ಹೇಳುತ್ತಿದ್ದ: ಬೇಗ ಬರ್ತೇನೆ, ನಿನ್ನ ಬಸ್ಸು ಒಂಬತ್ತಕ್ಕೆ.
ಬಾನು ಬಿತ್ತು ನನ್ನ ಮೇಲೆ ಹಾಗೂ ಅಪ್ಪನೊಬ್ಬನ ದಣಿದ ಕಪಟತನ.
ಉದ್ದಕ್ಕೆ ಸಪೂರವಿದ್ದ ಅವಳ ವಯಸ್ಸು ರಬ್ಬರಿನಂತೆ ತಣ್ಣಗಿತ್ತು.
ಹುಳುವಿನಂತ ಕಾಲಗಲಿಸಿದಳು. ಅಲ್ಲಿನ ಹಸಿವು ಅರಿತೆ,
ಆ ಇನ್ನೊಂದು ಹಸಿವು, ಮೀನಂತೆ ತಿಣುಕುತ್ತ ಒಳತಿರುಗಿತು.

— ಜಯಂತ ಮಹಾಪಾತ್ರ (Hunger)

ಜಯಂತ ಮಹಪಾತ್ರ ಇಂಗ್ಲೀಷಿನಲ್ಲಿ ಬರೆಯುವ ಒರಿಯಾ ಕವಿ. ತಮ್ಮ ಸೂಕ್ಷ್ಮ ಸಂವೇದಿ ಕವನಗಳಿಗೆ ಪ್ರಸಿದ್ಧರು. ಇವರ ಕವನಗಳಲ್ಲಿ ಓರಿಸ್ಸಾದ ನದಿನಾಡು-ನಡೆನುಡಿ-ನಾಡಿಮಿಡಿತವಾಗಿ ಬರುತ್ತವೆ. ತಡವಾಗಿ ಬರೆಯಲು ಶುರುಮಾಡಿದ ಜಯಂತ ಶೀಘ್ರ ಭಾರತದ ಒಳ್ಳೆಯ ಕವಿಗಳಲ್ಲಿ ಒಬ್ಬರೆಂದು ಹೆಸರಾದರು. ಭಾಷೆಯ ಚತುರ ಪ್ರಯೋಗ, ಸಾಮಾನ್ಯ ಜೀವನದ ಬಗೆ ಬಗೆಯ ನವೆಗಳನ್ನು ಚುರುಕು ತಾಗುವಂತೆ ಬರೆವ ಜಯಂತ ತಮ್ಮ ಕಾವ್ಯವನ್ನು ಅಂತಸ್ಸಾಕ್ಷಿಯ ಒರೆಗಲ್ಲಾಗಿ ಉಪಯೋಗಿಸುತ್ತಾರೆ. ನಮ್ಮ ಪರಿಸರದೊಳಗೆ ಕಾಣುವ ನಾನಾ ಕೀಟಲೆಯ ನಿತ್ಯಬದುಕಿನ ಬಗ್ಗೆ, ಬಡತನದ ಬೇಗೆಯಲ್ಲಿ ಸಿಲುಕಿ ನಲುಗಿದ ಒಂದಿಡೀ ತಲೆಮಾರಿನ ಬಗ್ಗೆ ಅವರ ಕವನಗಳಲ್ಲಿ ಸೂಕ್ಷ್ಮ ಪರೀಕ್ಷೆ ಇರುತ್ತದೆ. ಈ ಕವನದಲ್ಲಿ ಹಸಿವು ಶಬ್ದದ ಎರಡೂ ಅರ್ಥಗಳು ಪರಿಣಾಮಕಾರಿಯಾಗಿ ಬಂದಿವೆ. ಬಡತನದಿಂದ ಸೊರಗಿದ ತಂದೆಯೊಬ್ಬ ತನ್ನ ಮಗಳ ದೇಹಮಾರಿ ಹೊಟ್ಟೆಪಾಡು ಮಾಡುತ್ತಲಿದ್ದಾನೆ. ಕಾಮದ ಹಸಿವಿನ ತೃಪ್ತಿಗಾಗಿ ಹುಡುಕುತ್ತಿರುವ ಪ್ರವಾಸಿಗನೊಬ್ಬ ಇಲ್ಲಿ ನಿರೂಪಕ. ತಂದೆಯೇ ತನ್ನ ಆಡುವ ವಯಸ್ಸಿನ ಮಗಳನ್ನು ಸೂಳೆಯಾಗಿಸುವ, ಹಾಗೂ ಹಾಗೆ ಮಾಡಿ ಹಸಿವನ್ನು ಎದುರಿಸುವ ಭಯಾನಕ ಚಿತ್ರದೆದುರು ಆತನ ಕಾಮುಕತೆ ನಲುಗಿಬಿಡುತ್ತದೆ. ಮಾರ್ಮಿಕವಾದ ಈ ಕವನದಲ್ಲಿ ಒದಗುವ ಸಾಮಾಜಿಕ ಟೀಕೆ ಎಷ್ಟು ಸೂಕ್ಷ್ಮವಾಗಿ ಬಂದಿದೆ ನೋಡಿ.

ಗೆಬ್ರಿಯಲ್ ಒಕಾರಾ – ಒಂದಾನೊಂದು ಕಾಲದಲ್ಲಿ

ಮಗು,
ಒಂದಾನೊಂದು ಕಾಲದಲ್ಲಿ
ಅವರು ಎದೆಯಾಳದಿಂದ ನಗುತ್ತಿದ್ದರು
ಮತ್ತು ನಗು ಕಣ್ಣುಗಳಲಿದ್ದವು;
ಆದರೀಗ, ಅವರು ಬರಿದೆ ಹಲ್ಲು ತೋರಿಸುತ್ತಾರೆ
ಅವರ ಮಂಜಿನಂತ ತಣ್ಣಗಿನ ಕಣ್ಣುಗಳು
ಹುಡುಕುತ್ತವೆ ನನ್ನ ನೆರಳುಗಳ ಹಿಂದೆ.

ನಿಜವಾಗೂ, ಒಂದು ಕಾಲದಲ್ಲಿ
ಅವರು ಎದೆಯಾಳದಿಂದ ಕೈಕುಲುಕುತ್ತಿದ್ದರು,
ಮಗು, ಅದೀಗ ಮುಗಿದ ಕಾಲ;
ಈಗವರು ಕೈಕುಲುಕುತ್ತಾರೆ ಅರೆಮನಸಲ್ಲಿ
ನನ್ನ ಖಾಲಿಕಿಸೆಯನ್ನು ತಡಕುತ್ತಾವೆ ಅವರ ಕೈಗಳು.

ಬನ್ನಿ ಮನೆಗೆ ಮತ್ತೆ, ಆರಾಮಾಗಿರಿ, ಅಂತಾರೆ.
ಮನೆಗೆ ಹೋದರೆ, ಅಲ್ಲಿ ಆರಾಮಿಸಿದರೆ, ಒಮ್ಮೆ,
ಇನ್ನೊಮ್ಮೆ – ಅಷ್ಟೆ ಮತ್ತೊಮ್ಮೆ ಹೋಗುವಂತಿಲ್ಲ
ಬಾಗಿಲು ಮುಚ್ಚಿರುತ್ತದೆ ನಾ ಬಂದರೆ.

ಹಾಗಾಗಿ ಮಗು, ನಾನು ಹಲವು ವಿಷಯ ಕಲಿತಿದ್ದೇನೆ:
ಬಟ್ಟೆಯಂತೆ ಮುಖ ಬದಲಿಸಲು –
ಮನೆ ಮುಖ, ಕಛೇರಿ ಮುಖ, ಬೀದಿ ಮುಖ,
ಗೃಹಸ್ಥನ ಮುಖ, ಸಮಾರಂಭಗಳ ಮುಖ –
ಆ ಎಲ್ಲ ಮುಖಗಳಲ್ಲಿ ಬಗೆಬಗೆಯ ನಗೆಯನ್ನು
ನಿಕ್ಕಿಗೊಳಿಸಿದ್ದೇನೆ,
ನಾನೂ ಕೂಡ ನಗುವಾಗ ಬರಿತೆ ಹಲ್ಲು ಕಿರಿಯುವುದ
ಮನಸಿಲ್ಲದೇ ಕೈಕುಲುಕುವುದ ಕಲಿತಿದ್ದೇನೆ;
‘ಮತ್ತೆ ಬನ್ನಿ’ ಅನ್ನುತ್ತೇನೆ, ಮನಸಲ್ಲಿ ‘ತೊಲಗು ಶನಿ’ ಅನ್ನುತ್ತ;
‘ಕಂಡು ಸಂತೋಷ’ ಅನ್ನುತ್ತೇನೆ ಸಂತೋಷವಿಲ್ಲದೇ,
ಹಾಗೂ, ತಲೆಚಿಟ್ಟಾಗಿದ್ದರೂ, ‘ನಿಮ್ಮ ಜತೆ ಮಾತಾಡಿ ಖುಷಿಯಾಯಿತು’ ಅನ್ನುತ್ತೇನೆ.

ನಂಬು ಮಗುವೇ,
ನಾನು ಮತ್ತೆ ನಾನಾಗಬೇಕು,
ನಿನ್ನ ಹಾಗಿದ್ದಾಗ ನಾನಿದ್ದಂತೆ;
ಈ ಮೂಕಗೊಳಿಸುವ ಕಲಿಕೆಯೆಲ್ಲ ತೊರೆಯಬೇಕು;
ಎಲ್ಲಕ್ಕಿಂತ ಹೆಚ್ಚಾಗಿ, ನಾನು ಮತ್ತೆ ಕಲಿಯಬೇಕು
ನಗುವುದನ್ನು;
ಕನ್ನಡಿಯೆದುರು ನನ್ನ ನಗೆಯಲ್ಲಿ
ಈಗ ನಾನು ಹಾವಿನ ಹಲ್ಲುಗಳನ್ನಷ್ಟೇ ಕಾಣುತ್ತಿದ್ದೇನೆ!

ತೋರು ನನ್ನ ಮಗುವೇ,
ನಗುವ ಬಗೆಯನ್ನು:
ತೋರಿಸು
ನಾನು ಒಂದು ಕಾಲದಲ್ಲಿ ನಿನ್ನಂತೆ ಇದ್ದಾಗ
ನಗುತ್ತಿದ್ದುದನ್ನು
ಕಲಿಸು ಮಗುವೆ.

——- ಗೆಬ್ರಿಯಲ್ ಒಕಾರಾ (Once upon a time)

ಚಿನುವಾ ಅಚೀಬೆ – ನಿರಾಶ್ರಿತ ತಾಯಿ ಮತ್ತು ಮಗು

ಮಡೋನಾ ಮತ್ತು ಮಗುವಿನ ಯಾವೊಂದು ಕಲೆಯೂ
ನಿಲುಕದಂತ ಚಿತ್ರವೊಂದರಲ್ಲಿ
ಕೆಲವೇ ಕ್ಷಣಗಳಲ್ಲಿ ಮರೆಯಬೇಕಿರುವ ತನ್ನ
ಕಂದನ ಕುರಿತ ತಾಯಿಯೊಬ್ಬಳ ವಾತ್ಸಲ್ಯ.

ಬೇಧಿಯಿಂದ ಬಳಲುವ ಕುಂಡೆ ತೊಳೆಯದ ಮಕ್ಕಳ ವಾಸನೆ
ಗಾಳಿ ತುಂಬಿತ್ತು;
ತಮ್ಮ ನಿತ್ರಾಣ ಪಕ್ಕೆಲುಬು, ಬತ್ತಿದ ಅಂಡು,
ಕಂಗಾಲು ಹೊಟ್ಟೆಯ ಹೊತ್ತು ಎತ್ತಲಾರದ ಹೆಜ್ಜೆ
ಇಡುತ್ತ ಸಾಗಿದ್ದರು.
ಅಲ್ಲಿಯ ಹೆಚ್ಚುಪಾಲು ತಾಯಂದಿರು
ಭರವಸೆ ತೊರೆದು ಮಕ್ಕಳಾರೈಕೆ ಬಿಟ್ಟಿದ್ದರೂ,
ಇವಳಲ್ಲ. ಹಲ್ಲುಗಳ ನಡುವೆ ಒಂದು ಪ್ರೇತ ನಗೆಯಿತ್ತು,
ಕಣ್ಣಲ್ಲಿ ತಾಯಿಹೆಮ್ಮೆಯ ಪ್ರೇತಕಳೆ,
ಮಗನ ತಲೆಮೇಲೆ ಅಳಿದುಳಿದ, ಧೂಳು ಮೆತ್ತಿದ ಕೂದಲು ಬಾಚುತ್ತ
– ಕಣ್ಣಲ್ಲೇ ನಗುತ್ತ –
ಬೈತಲೆ ತೆಗೆದು ಒಪ್ಪಮಾಡುತ್ತ…

ಇನ್ನಾವುದೋ ದಿನದ ಜೀವನದಲ್ಲಿ
ಇದೊಂದು ಅವನ ಬೆಳಗಿನ ತಿಂಡಿಯಂತೆ ಶಾಲೆಯ ಮುಂಚಿನ
ಸಾಧಾರಣ ದೈನಂದಿನ ಕ್ರಿಯೆಯಾಗಬಹುದಿತ್ತು.

ಈಗವಳು,
ಚಿಕ್ಕ ಗೋರಿಯ ಮೇಲೆ ಹೂ ಸುರಿದಂತೆ
ಇಲ್ಲಿ ತೊಡಗಿಕೊಂಡಿದ್ದಳು.

——– ಚಿನುವಾ ಅಚೀಬೆ (Refugee Mother and Child)