ಬತ್ತಲ ಅರಿವೆ

ಹೀಗೇ ಕುಳಿತಿರುವಾಗ ಬತ್ತಲಾಗಿ ಬಿಟ್ಟೆ
ತೊಟ್ಟ ಬಟ್ಟೆ ಕಳೆದು ಹೋಗಿ ಗುಟ್ಟುಗಳ ಬಿಚ್ಚಿಟ್ಟು
ಬಯಲಲ್ಲಿ, ಬೆಳಗಲ್ಲಿ, ಮೆಲ್ಲಮೆಲ್ಲನೆ ಕಣ್ಣುಬಿಟ್ಟೆ
ಅರಿವೆ ಇಲ್ಲದ ಮೈ
ಕಾಲು, ಮಂಡಿ, ತೊಡೆ, ನಡು ಹೊಟ್ಟೆ …
ಬತ್ತಲು ಎಷ್ಟು ಸರಳ.
ಗಾಳಿಗೆ ಮೈಚಾಚಲೇ? ಹಾರಿ ತೇಲುವೆ
ನೀರಿಗೆ ಮೈಚೆಲ್ಲಲೇ? ತೇಲಿ ಈಜುವೆ
ಆಗ ಬತ್ತಲ ಮೈಮೇಲೆಲ್ಲ ಗಾಳಿಯೊಳಗಿನ
ನೀರಿನೊಳಗಿನ ಜೀವಿಗಳಾಡುತ್ತಾವೆ.
ಮೇಲೇರಿದಂತೇ, ಗಾಳಿಯಲ್ಲಿಯೇ ನೀರು ಮೈಮುತ್ತಿಕೊಂಡು
ಆ ಮಳೆಗೆ ಮುತ್ತಿಕ್ಕಿ ಹಾರುವ ಚೂಪು ಹಕ್ಕಿ ಬಂದು
ನನ್ನ ಮೇಲೆ ಸವಾರಿ ಮಾಡತೊಡಗಿ
ಅದು ಕೂತ ಸೊಗಸಿಗೆ ಸೋಜಿಗಪಟ್ಟು
ನಾನೂ ಸುಮ್ಮನಾಗಿ, ವ್ಹಾ! ತೇಲುತ್ತ ನೋಡುತ್ತೇನೆ
ಆ ಚೂಪು ಹಕ್ಕಿ ಚುಂಚಿಂದ ಜೊಲ್ಲು ಸುರಿದು
ಸುರಿದು
ನನ್ನ ಮೈಮೇಲೆ ಚೆಲ್ಲಿ, ಇಡೀ ಮೈಗೂ ಆ ಜೊಲ್ಲು ಆವರಿಸಿ
ಅಂಟಿ, ಹಗುರ ಅರಿವೆಯಂತೇ ಅಂಟಿಬಿಟ್ಟಿತೇ?
ನೋಡುತ್ತೇನೆ:
ನಾ ಬತ್ತಲಲ್ಲ, ಸುತ್ತಿಕೊಂಡಿದೆ ಅರಿವೆ.
ಸುತ್ತಲೂ ಕತ್ತಲು
ಗುಮ್ಮನಿಗೆ ಬಚ್ಚಿ ಕೂತ ಮಗುವಂತೆ ಮೂಲೆಯಲ್ಲಿ
ಮುದುಡಿ
ನಾ ನಿದ್ದೆ.

ಫ್ರಾಂಝ್ ಕಾಫ್ಕಾ – ಕಾಯಿದೆಯ ಎದುರು


ಕನ್ನಡಕ್ಕೆ: ಕಮಲಾಕರ ಕಡವೆ

 

ಕಾಯಿದೆಯ ಎದುರು ಒಬ್ಬ ದ್ವಾರಪಾಲಕ. ಅವನ ಎದುರು ಒಬ್ಬ ಹಳ್ಳಿಮನಷ ಬರುತ್ತಾನೆ ಮತ್ತು ಕಾಯಿದೆಯ ಎದುರು ಹೋಗಲು ಅನುಮತಿ ಬೇಡುತ್ತಾನೆ. ಆದರೆ ದ್ವಾರಪಾಲಕ ತತ್ ಕ್ಷಣ ಒಳಹೋಗಲು ಅನುಮತಿ ನೀಡಲಾಗದು ಅನ್ನುತ್ತಾನೆ. ಆ ಹಳ್ಳಿಮನಷ ಕೊಂಚ ಯೋಚಿಸಿ, ಆ ಮೇಲೆ ಒಳಹೋಗಲಾದೀತೆ ಎಂದು ವಿಚಾರಿಸುತ್ತಾನೆ. “ಆದೀತು, ಆದರೆ ಈಗಲ್ಲ”, ಅನ್ನುತ್ತಾನೆ ದ್ವಾರಪಾಲಕ. ಬಾಗಿಲು ಎಂದಿನಂತೆ ತೆರೆದೇ ಇದ್ದದ್ದರಿಂದ, ದ್ವಾರಪಾಲಕ ಪಕ್ಕಕ್ಕೆ ಸರಿದಂತೇ, ಆ ಹಳ್ಳಿಮನಷ ಬಗ್ಗಿ ಒಳಗಿನತ್ತ ನೋಡುತ್ತಾನೆ. ಇದನ್ನು ಗಮನಿಸಿದ ದ್ವಾರಪಾಲಕ, ನಕ್ಕು ಅವನಿಗೆ ಹೇಳುತ್ತಾನೆ, “ನಿನಗೆ ಹಾಗನ್ನಿಸಿದರೆ ನನ್ನ ಮಾತಿಗೆ ಪ್ರತಿಯಾಗಿ ಒಳಹೋಗಲು ಪ್ರಯತ್ನ ಮಾಡು. ಆದರೆ ನೆನಪಿರಲಿ, ನಾನು ಬಲಿಷ್ಠನಿದ್ದೇನೆ. ಮತ್ತು ನಾನು ದ್ವಾರಪಾಲಕರುಗಳಲ್ಲೆಲ್ಲಾ ಅತಿ ಸಣ್ಣಗಿನವ. ಕೋಣೆಯಿಂದ ಕೋಣೆಗೆ ದ್ವಾರಪಾಲಕರು ಎದುರಾಗುತ್ತಾರೆ ಮತ್ತು ಒಬ್ಬೊಬ್ಬರೂ ಮೊದಲಿನವರಿಗಿಂತ ಹೆಚ್ಚು ಬಲಿಷ್ಠರು. ಮೂರನೇ ದ್ವಾರಪಾಲಕನವರೆಗೆ ತಲುಪಿದರೂ ಸಾಕು, ಆತ ಎಷ್ಟು ಭಯಾನಕನಿದ್ದಾನೆ ಎಂದರೆ, ನಾನೂ ಸಹ ಅವನನ್ನು ಕಣ್ಣೆತ್ತಿ ನೋಡಲು ಹೆದರುತ್ತೇನೆ.” ಈ ಬಗೆಯ ತಡೆಗಳನ್ನು ಹಳ್ಳಿಮನಷ ಎಣಿಸಿರಲಿಲ್ಲ; ಕಾಯಿದೆ ಎಲ್ಲರಿಗೂ ಎಂದಿಗೂ ಎಟಕುವಂತಿರಬೇಕಲ್ಲವೇ ಎಂದುಕೊಳ್ಳುತ್ತಾನೆ ಆತ, ಆದರೆ ಈಗ ಕಡಕ್ಕು ಕೋಟು ತೊಟ್ಟು ಕೂತಿರುವ ಆ ದ್ವಾರಪಾಲಕನನ್ನ ಹತ್ತಿರದಿಂದ ನೋಡಿದಂತೆ, ಅವನ ಉದ್ದನ ಚೂಪು ಮೂಗು ಮತ್ತು ತೆಳ್ಳನ ಕಪ್ಪನೆಯ ನೀಳ ಗಡ್ಡವನ್ನು ನೋಡಿದಂತೆ, ಅನುಮತಿ ಸಿಗುವವರೆಗೆ ಕಾಯುವುದೇ ಲೇಸು ಎಂದು ನಿರ್ಧರಿಸುತ್ತಾನೆ. ದ್ವಾರಪಾಲಕ ಅವನಿಗೆ ಒಂದು ಕುರ್ಚಿ ಕೊಟ್ಟು ಬಾಗಿಲ ಬದಿಯಲ್ಲಿ ಕೂರಗೊಡುತ್ತಾನೆ. ಅಲ್ಲಿ ಅವನು ದಿನಾನುದಿನ ವರ್ಷಗಳಕಾಲ ಕೂತಿರುತ್ತಾನೆ. ಬಹಳ ಸಲ ಅವನು ಒಳಹೋಗಲು ಪ್ರಯತ್ನ ಮಾಡುತ್ತಾನೆ, ದ್ವಾರಪಾಲಕನಿಗೆ ಬೇಡಿ ಬೇಡಿ ಕಾಡುತ್ತಾನೆ. ಅವನೊಡನೆ ಆಗೀಗ ದ್ವಾರಪಾಲಕ ಚಿಕ್ಕಪುಟ್ಟ ಸಂಭಾಷಣೆ ನಡೆಸುತ್ತಾನೆ, ಅವನ ಮನೆ ಮತ್ತಿತರ ವಿಷಯ ವಿಚಾರಿಸುತ್ತಾನೆ. ಆದರೆ ಯಾವಾಗಲೂ ಅವು ನಿರಾಸಕ್ತ ಪ್ರಶ್ನೆಗಳಾಗಿರುತ್ತವೆ, ದೊಡ್ಡ ದೊಡ್ಡ ಸಾಹೇಬರುಗಳು ಕೇಳುವಂತೆ ಮತ್ತು ಯಾವಾಗಲೂ ಅವು ಒಳಹೋಗಲು ಅನುಮತಿ ಇಲ್ಲ ಅನ್ನುವಲ್ಲಿ ಕೊನೆಯಾಗುತ್ತವೆ. ಹಳ್ಳಿಮನಷ ತಾನು ಪ್ರಯಾಣನಿಮಿತ್ತ ಜತೆಗೆ ತಂದ ಏನೆಲ್ಲವನ್ನೂ ತ್ಯಾಗಮಾಡಿ ದ್ವಾರಪಾಲಕನಿಗೆ ಲಂಚವಾಗಿ ಕೊಡುತ್ತಾನೆ. ಪ್ರತಿ ಸಲವೂ ದ್ವಾರಪಾಲಕ ಅವುಗಳನ್ನು ಸ್ವೀಕರಿಸುತ್ತ ಹೇಳುತ್ತಾನೆ, “ಇವನ್ನೆಲ್ಲ ನಾನು ತೆಗೆದುಕೊಳ್ಳುತ್ತಿರುವುದೇಕೆಂದರೆ ನಿನಗೆ ಎಲ್ಲವನ್ನೂ ಮಾಡಿದ ತೃಪ್ತಿ ಇರಲಿ ಎನ್ನುವ ಮಾತ್ರಕ್ಕೆ.” ಎಷ್ಟೋ ವರ್ಷಗಳವರೆಗೆ ಸತತವಾಗಿ ಆ ಹಳ್ಳಿಮನಷ ದ್ವಾರಪಾಲಕನ ಮೇಲೆ ತನ್ನ ನೋಟ ನೆಡುತ್ತಾನೆ. ಅವನು ಇತರ ದ್ವಾರಪಾಲಕರನ್ನು ಮರೆಯುತ್ತಾನೆ, ಈ ಮೊದಲಿನವನೇ ಆತನಿಗೆ ಕಾಯಿದೆಯನ್ನು ತಲುಪಲು ತನಗಿರುವ ಏಕಾಕಿ ಕಂಟಕವಾಗಿ ಕಾಣುತ್ತಾನೆ. ಅವನು ತನ್ನ ದುರಾದೃಷ್ಟವನ್ನು ಹಳಿಯುತ್ತಾನೆ, ಮೊದಮೊದಲ ವರ್ಷಗಳಲ್ಲಿ ದೊಡ್ಡ ದನಿಯಲ್ಲಿ, ಆದರೆ ವಯಸ್ಸಾದಂತೆ ಒಳಗೊಳಗೇ ವಟವಟಗುಟ್ಟುತ್ತಾನೆ. ಮಕ್ಕಳಂತ್ತಾಡತೊಡಗುತ್ತಾನೆ. ಮತ್ತು, ದ್ವಾರಪಾಲಕನನ್ನು ಇಷ್ಟೆಲ್ಲ ವರ್ಷಗಳವರೆಗೆ ಸತತ ಧ್ಯಾನವಿಟ್ಟು ಕಾಣುತ್ತ ಕುಳಿತಿರುವ ಅವನಿಗೆ, ದ್ವಾರಪಾಲಕನ ಕೋಟಿನ ಕಾಲರಿನ ಮೇಲೆ ಕುಳಿತ ಹೇನು ಕೂಡ ಪರಿಚಯವಾಗಿಬಿಟ್ಟಿರುವುದರಿಂದ, ಆ ಹೇನುಗಳಿಗೂ ಮೊರೆ ಇಡುತ್ತಾನೆ ದ್ವಾರಪಾಲಕನ ಮನಪರಿವರ್ತನೆಗೆ ಬೇಡಿಕೊಂಡು. ಹೀಗೇ ಕಾಲ ಸರಿದು ಅವನ ದೃಷ್ಟಿಯೂ ಮಂಜಾಗತೊಡಗುತ್ತದೆ. ಅವನಿಗೆ ಜಗವೇ ಕರಾಳವಾಗುತ್ತಿದೆಯೇ ಅಥವಾ ತನ್ನ ಕಣ್ಣುಗಳೇ ಮೋಸಮಾಡುತ್ತಿವೆಯೇ ಅರಿವಿಗೆ ಬರುವುದಿಲ್ಲ. ಹಾಗಿದ್ದೂ ಅಂಧಕಾರದಲ್ಲಿ ಮುಳುಗಿದ್ದಾತನಿಗೆ ಸದಾ ತೆರೆದಿರುತ್ತಿದ್ದ ಕಾಯಿದೆಯ ಬಾಗಿಲೆಡೆಯಿಂದ ಎಡೆಬಿಡದೇ ಸೂಸುತ್ತಿರುವ ಪ್ರಭೆಯೊಂದು ಅರಿವಿಗೆ ಬರುತ್ತದೆ. ವಯಸ್ಸು ತುಂಬಿಬಂದಿರುವ ಅವನಿಗಿನ್ನು ಹೆಚ್ಚು ಬಾಳು ಉಳಿದಿಲ್ಲ.  ಸಾಯುವ ಮೊದಲು, ಅವನ ಈವರೆಗಿನ ಎಲ್ಲ ಕಟು ಅನುಭವಗಳೂ ಒಟ್ಟಾಗಿ ಅವನ ಒಳಗಿನಿಂದ ಇಲ್ಲಿಯವರೆಗೆಂದೆಂದೂ ಕೇಳಿರದ ಒಂದು ಪ್ರಶ್ನೆಯನ್ನು ಎತ್ತುತ್ತವೆ. ಸ್ವತಃ ಏಳಲೂ ಆಗದ ಸ್ಥಿತಿಯಲ್ಲಿರುವ ಅವನು ಕೈಬೀಸಿ ದ್ವಾರಪಾಲಕನನ್ನು ಬಳಿಗೆ ಕರೆಯುತ್ತಾನೆ. ಹಳ್ಳಿಮನಷನ ಆಕೃತಿಯೂ ಕುಬ್ಜವಾಗಿಬಿಟ್ಟಿರುವುದರಿಂದ ಅವನ ಮಾತನ್ನು ಕೇಳಲು ದ್ವಾರಪಾಲಕ ಬಗ್ಗಬೇಕಾಗುತ್ತದೆ. “ಈಗೇನು ಕೇಳಬೇಕಾಗಿ ಬಂದಿದೆ ನಿನಗೆ”, ದ್ವಾರಪಾಲಕ ಸಿಡಿಮಿಡಿ ಮಾಡುತ್ತಾನೆ, “ಸಮಾಧಾನವೇ ಇಲ್ಲವಲ್ಲ ನಿನಗೆ”. “ಎಲ್ಲರಿಗೂ ಕಾಯಿದೆಯ ಫಾಯಿದೆ ಬೇಕಾಗಿಯೇ ಇರುತ್ತದಾದರೂ, ಇಷ್ಟೆಲ್ಲ ವರ್ಷಗಳಲ್ಲಿ ನನ್ನನುಳಿದು ಬೇರೆ ಯಾರೂ ಕೂಡ ಒಳಹೋಗಲೆಂದು ಬೇಡಿಕೊಂಡು ಈ ಬಾಗಿಲ ಬಳಿ ಬರಲಿಲ್ಲವಲ್ಲ, ಯಾಕೆ?” ಎಂದು ಕೇಳುತ್ತಾನೆ ಆ ಹಳ್ಳಿಮನಷ. ಅವನ ಕೊನೆ ಘಳಿಗೆ ಬಂದಿರುವುದನ್ನ ಅರಿತ ದ್ವಾರಪಾಲಕ, ಇಂದ್ರಿಯಗಳೆಲ್ಲ ಜಡವಾಗುತ್ತಿರುವ ಅವನ ಕಿವಿಯ ಬಳಿ ಜೋರಾಗಿ ಕಿರುಚುತ್ತಾನೆ, “ಬೇರೆ ಯಾರೂ ಈ ಬಾಗಿಲ ಮೂಲಕ ಒಳಹೋಗುವಂತಿರಲಿಲ್ಲ, ಏಕೆಂದರೆ ಇದು ನಿನಗೊಬ್ಬನಿಗಾಗಿಯೇ ಮಾಡಿದ್ದ ಬಾಗಿಲಾಗಿತ್ತು. ಇನ್ನು ನಾನು ಈ ಬಾಗಿಲನ್ನು ಮುಚ್ಚುತ್ತೇನೆ”.

 

ವಾಸ್ತವವೆಂದರೆ ವಾಸ್ತವವೇ?

ವಾಸ್ತವ ಎನ್ನುವುದು ಮಾಯೆ ಎಂದು ನಂಬುವುದಿದೆ. ಅದೊಂದು ಆದಿಭೌತಿಕ ನಿಲುವು. ಆದರೆ ಭೌತಿಕ ನೆಲೆಯಲ್ಲೂ ಕೂಡ ಈ ಕುರಿತು ಅದೇ ತರಹದ ನೋಟ ನಾವು ಕಾಣುತ್ತೇವೆ. ಅಂದರೆ, ವಾಸ್ತವವಾಗಿ ವಾಸ್ತವವೆಂದರೆ ಕಥನಗಳ ಮೂಲಕ ನಾವು ಕಟ್ಟಿಕೊಳ್ಳುವ ನಂಬಿಕೆಗಳು ಎಂಬರ್ಥದಲ್ಲಿ. ನಾವು ಕಾಣುವುದೆಲ್ಲ ಇರುವಹಾಗೇ ನಮಗೆ ಅರಿವಿಗೆ ಬರುತ್ತದೆ ಎನ್ನುವುದು ಕಲ್ಪನೆಯೇ ಸರಿ. ಸಮಾಜ ಜೀವಿಗಳಾದ ನಮಗೆ, ಸಾಮಾಜಿಕ ಕಥನಗಳು ಕಟ್ಟಿಕೊಟ್ಟಿರುವ ತಿಳಿವಿನ ಪ್ರಕಾರಗಳ ಹೊರತು ಇನ್ನೇನೂ ಅರಿವಿನ ಸಾಧ್ಯತೆ ಇಲ್ಲ. ಹಾಗಾಗಿಯೇ ಭಾಷೆಯ ಹೊರಗೆ ಏನೂ ಇಲ್ಲ ಎಂದು ಕೆಲವರ ಅಂಬೋಣ.

ಇದನ್ನು ನಿಧಾನವಾಗಿ ನೋಡೋಣ. ನನ್ನ ಕಣ್ಣ ಮುಂದೆ ಬಾಳೆಹಣ್ಣಿದೆ. ಆ ಬಾಳೆ ಹಣ್ಣು ವಾಸ್ತವವೋ, ಕಥನವೋ? ಭೌತಿಕವಾಗಿ ಬಾಳೆಹಣ್ಣಿರುವುದು ಪ್ರಶ್ನಾತೀತ. ಆದರೆ ಅದು ಬಾಳೆ ಹಣ್ಣು ಎಂಬ ನನ್ನೊಳಗಿನ ಅರಿವು ಹಾಗು ಆ ಭೌತಿಕ ವಸ್ತುವಿನ ನಡುವೆ ಸಾಮ್ಯವಿದ್ದರೆ ಅದಕ್ಕೆ ಆ ವಸ್ತುವಿನ ಬಗ್ಗೆ ನಾನು ಆಂತರಿಸಿಕೊಂಡ ಸಾಮಾಜಿಕ ಕಥನಗಳೇ ಕಾರಣ. ಯಾಕೆಂದರೆ ಆ ಭೌತಿಕ ವಸ್ತು ನನಗೆ ಒಂದು ವಿಶಿಷ್ಟ ಬಗೆಯ ಹಣ್ಣಾಗಿ, ವಿಶಿಷ್ಟ ಗುಣಗಳೊಂದಿಗೆ, ವಿಶಿಷ್ಟ ಉಪಯೋಗಗಳಿರುವ ವಸ್ತುವಾಗಿ ಅರಿವಾಗುತ್ತಿದೆ. ಈ ಎಲ್ಲ (ಇಂತಹ ಎಲ್ಲ) ತಿಳಿವು ಇರದಿದ್ದರೆ ಆ ವಸ್ತು ಏನೊಂದೂ ಆಗಲಾರದು. (ಅದು ವಸ್ತು ಎಂದು ತಿಳಿವುದರ ಪ್ರಕ್ರಿಯೆಯೂ ಹೀಗೆಯೇ ಇರುತ್ತದೆಯಾಗಿ). ಅಂದರೆ, ಬಾಳೆ ಹಣ್ಣು ಬಾಳೆ ಹಣ್ಣಾಗಿರುವುದು ಅದರದ್ದೇ ಆದ ಗುಣಲಕ್ಷಣಗಳಿಂದಾದರೂ, ಅದು ನನಗೆ ಬಾಳೆಹಣ್ಣಾಗುವುದು ಅದರ ಹೊರತಾದ ನನ್ನ ಸಾಮಾಜಿಕ/ಸಾಂಸ್ಕೃತಿಕ ಪ್ರಜ್ನಾವಲಯದ ಮೂಲಕವೇ.

ಹೀಗೆ ಶುರುಮಾಡಿದರೆ ಕಥನಗಳು ಹೇಗೆ ನಮ್ಮ ನಿತ್ಯ ವ್ಯವಹಾರಗಳನ್ನು ನಿರ್ಮಿಸುತ್ತವೆ ಎಂದು ಅರಿವಿಗೆ ಬರುತ್ತದೆ. Social Text ಎಂಬ ಪತ್ರಿಕೆಯಲ್ಲಿ ನಡೆದ ಗಫಲಾ ಒಂದರಲ್ಲಿ ಸೋಕಲ್ ಎಂಬ ಭೌತ ಶಾಸ್ತ್ರಜ್ನನು ಈ ಥರಹದ ವಿಚಾರಗಳನ್ನು ಸುಳ್ಳು ಎಂದು ಸಾಧಿಸಲು ಆ ಪತ್ರಿಕೆಯನ್ನೇ ವಿಡಂಬಿಸುವ ಒಂದು ಪ್ರಯೋಗ ಮಾಡಿದ. (Sokal affair ಎಂದು ಗೂಗಲನಲ್ಲಿ ಹುಡುಕಿದರೆ ವಿವರಗಳು ಸಿಗುತ್ತವೆ). ವಾಸ್ತವ ಎನ್ನುವುದು ಸಾಮಾಜಿಕ ಕಥನ ಎನ್ನುವವರು ತನ್ನ ಹತ್ತನೇ ಮಹಡಿಯ ಮನೆಯ ಬಾಲ್ಕನಿಯಿಂದ ಹೊರ ಜಿಗಿದು ವಾಸ್ತವದ ಸತ್ಯತೆಯನ್ನು ಪರೀಕ್ಷಿಸಬಹುದು ಎಂದು ವ್ಯಂಗವಾಗಿ ಈ ವಿಚಾರವನ್ನು ಟೀಕಿಸಿದ. ಅವನು ಹೇಳುವುದು ಸರಿ. ಸೃಷ್ಟಿಯ ಆಗುಹೋಗುಗಳನ್ನು ಸಮಾಜ ಸೃಷ್ಟಿಸಿದೆ ಎನ್ನುವುದು ಸರಿ ಅಲ್ಲ. ಆದರೆ ಅವನು ಮುಗ್ಗರಿಸುವುದು ಇಲ್ಲಿಯೇ. ಸಾಮಾಜಿಕ ಕಥನಾವಾದ ಎನ್ನುವುದೆಂದರೆ, ಸ್ಥಿತಿಯ ಕುರಿತಾದ ನಮ್ಮ ಜ್ನಾನ ಕಥನವೆಂದೇ ಹೊರತೂ, ಸ್ಥಿತಿಯೇ ಕಥನವೆಂದಲ್ಲ. ಗುರುತ್ವಾಕರ್ಷಣ ಬಲದ ಕುರಿತು ನಮ್ಮ ಜ್ನಾನ ಕಥನವೆಂದೇ ಹೊರತೂ, ಆ ಬಲವೇ ಕಥನವೆಂದಲ್ಲ.

ಜ್ನಾನದ ಕಟ್ಟುಕೊಳ್ಳುವಿಕೆಯ ಈ ನಮ್ಮ ವ್ಯವಹಾರವನ್ನು ನಾವು ಸಾಮಾನ್ಯವಾಗಿ ನಿರ್ಲಕ್ಷಿಸಿ ಅದನ್ನು ನಿತ್ಯಸತ್ಯವೆಂದು ಸ್ವೀಕರಿಸಿಬಿಡುವುದು ಹಲವು ಬಗೆಯ ಗೊಂದಲಗಳನ್ನು ಹಾಗೂ ತೊಂದರೆಗಳನ್ನು ಹುಟ್ಟಿಸುತ್ತದೆ. ಇದು ಮಾನವ, ಮಾನವನ ಕುರಿತಾಗಿ ಕಟ್ಟಿಕೊಳ್ಳುವ ಜ್ನಾನಗಳಲ್ಲಿ ತನ್ನ ವಿಪರೀತಗಳನ್ನು ಪ್ರದರ್ಶಿಸುತ್ತದೆ. ಉದಾಹರಣೆಯಾಗಿ ಭಾರತದಲ್ಲಿ ಪಾಕಿಸ್ತಾನದ ಬಗ್ಗೆ ಇರುವ ನಂಬಿಕೆಗಳನ್ನೇ ನೋಡಬಹುದು. ಸಾಮನ್ಯವಾಗಿ ಇದು ನೆಗೆಟಿವ್ ಆದ ನಂಬಿಕೆ. ಅಂದರೆ ಪಾಕಿಸ್ತಾನಿಗಳು ಹಾಗೆ ಹೀಗೆ ಎಂಬಲ್ಲಿ, ಯಾರು ಯಾರು ಹಾಗೆ, ಎಲ್ಲರೂ ಹಾಗಿರುತ್ತಾರೆಯೇ ಎಂದೆಲ್ಲ ಯೋಚಿಸದೇ ಒಂದು ತರದ ಸಾರ್ವತ್ರಿಕ ರೂಪಿನಲ್ಲಿ ನಾವು ಪಾಕಿಸ್ತಾನ ಹಾಗೂ ಅಲ್ಲಿಯ ಜನರನ್ನು ಕಲ್ಪಿಸಿಕೊಂಡು ಬಿಡುತ್ತೇವೆ. ಹಾಗೆಯೇ, ವಸಾಹತುಶಾಹಿಯ ಸಮಯದಲ್ಲಿ ಭಾರತೀಯರ ಬಗ್ಗೆ ಬ್ರಿಟೀಷರಿಗಿದ್ದ ಕೆಲವು ನಂಬಿಕೆಗಳು. ಎಡ್ವರ್ಡ ಸಾಯಿದ್ ಅನ್ನುವಂತೇ ಹೀಗೆ ಮಾಡುವಾಗ ಆಗುವುದೇನೆಂದರೆ, ಮೊದಲು ಸಿಂಹ ಹೀಗಿರುತ್ತದೆ ಎಂಬ ವಿವರಣೆ ಯಾವುದೋ ಒಂದು ಅನುಭವದ ಮೇಲೆ ಹುಟ್ಟಿ ಆಮೇಲೆ, ಹೀಗಿರುವುದೆಲ್ಲ ಸಿಂಹವೇ, ಸಿಂಹ ಹೀಗೇ ಇರಬೇಕು, ನಮಗೆ ಗೊತ್ತಿರುವುದೋಂದೇ ಸಿಂಹ, ಇಲ್ಲದಿದ್ದರೆ ಅದು ಸಿಂಹವೇ ಅಲ್ಲ ಎನ್ನುವಷ್ಟರ ಮಟ್ಟಿಗೆ ಬರುತ್ತದೆ.

ದಿನದಿನದ ವ್ಯವಹಾರಗಳಲ್ಲಿ ಕೂಡ ನಾವು ಕಥಿತ ಜ್ನಾನವನ್ನು ಇತ್ಯಾತ್ಮಕ ಜ್ನಾನವೆಂದು ಸ್ವೀಕರಿಸಿ ಗೊಂದಲದೊಳಗಿರುತ್ತೇವೆ. ಅಂದರೆ, ನಮ್ಮ ನಂಬಿಕೆಗಳು ಮೇಲ್ನೋಟಕ್ಕೆ ಸತ್ಯ ಅನ್ನಿಸಿದರೂ, ಅವು ಸಾಂದರ್ಭಿಕ ಸಾಮಾಜಿಕ ಅಧಿಕಾರಗಳ ಜಾಲದಲ್ಲಿ ಹುಟ್ಟುಕೊಂಡ ಐಡಿಯಾಲಜಿಗಳನ್ನವಲಂಬಿಸಿರುತ್ತವೆ.

ಕಮಲಾಕರ

ಹುಚ್ಚು ಕನಸಿನ ತುಣುಕು

 

image from: google images

 

 

 

 

 

 

 

ಹೊಳೆಯಿಲ್ಲ ಬೆಳೆಯಿಲ್ಲ ಸಾಗರವೂ ಬಹುದೂರ

ಗುಡ್ಡಗಳೇ ಕ್ಷಿತಿಜವು ಎಲ್ಲ ಕಡೆಗೆ

ದಿಕ್ಕುಗಳು ನೆರೆಬಂದು ದುಂಡಗೆ ಮೈಚೆಲ್ಲಿ

ನೋಡನಿಂತಿವೆ ಉರಿಶಿಶ್ನದೆಡೆಗೆ

 

ಕಾಲವೆನ್ನುವೆಯೋ ನಿರಾಕಾರವೆನ್ನುವೆಯೋ

ಸಮ್ರಾಟ ಬಯಸಿದ ಉನ್ಮತ್ತ ಸ್ಥಿತಿಯೋ

ಮೂಲದಲಿ ಮಾನವನ ಕಾಲಡಿಯ ಹಾದಿ

ಏರಿದರೆ ಏರುವೀ ಏರಿ ದೇವಗಿರಿಯೋ

 

ಹಳ್ಳಿಹೊಲಗಳು ಬಂಜೆ ಕಲ್ಲುಬಯಲುಗಳು ಸುತ್ತ

ಉಬ್ಬಸದ ಹೆದ್ದಾರಿ ಹಿಡಿದು ಔರಂಗಾಬಾದು

ಅಲ್ಲಿಂದ ಮುಂದುಂಟು ಎಲ್ಲೋರಾ, ಅಜಂಠಾ

ವಿಪರೀತಗಳ ನಡುವೆ ಇದು ದಿವ್ಯ ಬೀಡು

 

ನೋಟ ನಿಲುಕದು, ಮಾಟ ನಿಲುಕದು, ಮಾತಿಗೋ ಇಲ್ಲೆಇಲ್ಲ

ಹತ್ತಿ ದುರ್ಗಮ ಕೋಟೆ ಕಾಲು ಕಂಗಾಲು

ಅವಶೇಷಗಳನು ಬಿಟ್ಟು ಮುಂದೆನಡೆದು ನೋಡಿದರೆ

ಅಡಿಯ ಕಂದಕದಿಂದೆದ್ದ ಗೋಡೆ ಕಡೆದಿಟ್ಟ ಕಲ್ಲು

 

ಬಿಲ್ಲೆ ಮೇಲಿನ ಮೊಹರು ಕತ್ತಿಅಲುಗಿನ ಸೃಷ್ಟಿ

ರಕ್ತಚಿತ್ರಗಳ ರಹದಾರಿ ತಂದಿತಿಲ್ಲಿಗೆ ದಿಲ್ಲಿ

ಕ್ರೂರ ಮಹಾಮತಿ ತನ್ನ ಹೊಸ ತರ್ಕ ಹೆಣೆದಂತೆ

ಹುಟ್ಟಿತಿಲ್ಲಿ ಮಸಣರೂಪದ ಅವನ ರಾಜಧಾನಿ

 

ತಾರೆಸಂಕುಲ ತಂದು ಸಾಮ್ರಾಜ್ಯ ಸಿಂಗರಿಸಿ

ಇತಿಹಾಸದಲಿ ನೆಲೆಸಿರುವ ರಮ್ಯ ಬಿಂದು

ಮುಠ್ಠಾಳ ತುಘಲಕನ ಅತಿಬುದ್ದಿಯ ಕಥೆ

ಹುಚ್ಚು ಕನಸಿನ ತುಣುಕು ದೌಲತಾಬಾದು

— ಕಮಲಾಕರ ಕಡವೆ (ಚೂರುಪಾರು  ರೇಷಮೆ)

 

image form: google images

ಮರಳಿದೆನು ಮನೆಗೆ, ಎಲ್ಲಿಗೂ ಹೋಗಲಿಲ್ಲ

ಬಿಡುವಿರದೆ ಸಾಗಿದ್ದಾರೆ ಜನ ನೂರುದಾರಿಗಳಲ್ಲಿ

ಆದರೂ ಹೆಜ್ಜೆಗಳ ಗುರುತು ಮೂಡಲಿಲ್ಲ

ಎಲ್ಲಿ ಹೋಗಲಿ ಈ ಸೊಕ್ಕುಸಂದಣಿಯಲ್ಲಿ

ಮರಳಿದೆನು ಮನೆಗೆ, ಎಲ್ಲಿಗೂ ಹೋಗಲಿಲ್ಲ

 

ಮಾರುಕಟ್ಟೆಯಲಿ ಅನುಗಾಲ ಜನರ ಪರಸ್ಪರ ಭೇಟಿ

ಆದರೂ ಮನಸುಗಳು ಅನ್ಯೋನ್ಯ ಬೆಸೆಯಲಿಲ್ಲ

ಏನಿತ್ತು ಸುಲಲೀತ ಒಲವಿರದ ಜಗದಲ್ಲಿ

ಮರಳಿದೆನು ಮನೆಗೆ, ಎಲ್ಲಿಗೂ ಹೋಗಲಿಲ್ಲ

 

ಉರಿವ ದಿನಚರಿಯಿಂದ ಘಾಸಿಯಾಯಿತು ಹೃದಯ

ಆದರೂ ಹುಣ್ಣಿಮೆಯ ಬೆಳಕನಾರೂ ಕಾಣುತಿಲ್ಲ

ಸಮಯವೇ ಇರಲಿಲ್ಲ ಲೆಕ್ಕದೀಲೋಕದಲಿ

ಮರಳಿದೆನು ಮನೆಗೆ, ಎಲ್ಲಿಗೂ ಹೋಗಲಿಲ್ಲ

 

ಕ್ಷಣಕ್ಷಣಕೂ ಮಾತುಗಳ ವಿನಿಮಯಕೆ ಇಲ್ಲ ಮಿತಿ

ಯಾರೊಳಗೂ ಸಹಮತಿಯು ಮೂಡುತಿಲ್ಲ

ಹಾಡುವುದು ಹೇಗಿಲ್ಲಿ ದನಿಗಳಬ್ಬರದಲ್ಲಿ

ಮರಳಿದೆನು ಮನೆಗೆ ಎಲ್ಲಿಗೂ ಹೋಗಲಿಲ್ಲ

 

ಬಿಸಿಲ ತಾಪಕೆ ನಾಚಿ ಮುಸುಕಿನಲಿ ಮುಚ್ಚಿರಲೇ

ನನೆಯೊಳಗೆ ಮರುಳ ನಾನಾದೆ ಒಂಟಿ

ತೆರೆದಿಟ್ಟೆ ಬಾಗಿಲನು, ಒಳಕರೆದೆ ಮಂದಿಯನು

ಸೇರಿ ಸುರ ಸಾರಿದೆವು, ಯಾರನೂ ಮರೆಯಲಿಲ್ಲ

————— ಕಮಲಾಕರ ಕಡವೆ

ಗೆಬ್ರಿಯೆಲಾ ಮಿಸ್ಟ್ರೆಲ್ ಕವಿತೆ: ಪುಟ್ಟ ಪಾದಗಳು

ಪುಟ್ಟ ಪಾದಗಳು

ಮಗುವೊಂದರ ಪುಟ್ಟ ಪಾದಗಳು

ನೀಲಿ,

ಥಂಡಯಿಂದ ನೀಲಿಯಾಗಿವೆ;

ಹೇಗವರು ನೋಡಿಯೂ ನಿರ್ಲಕ್ಷದಿಂದ ನಡೆದಿದ್ದಾರೆ

ಓ! ದೇವರೇ.

ಕಲ್ಲು ಹರಳುಗಳಿಂದ ಎಲ್ಲೆಡೆ ಚುಚ್ಚಿಸಕೊಂಡ

ಪುಟಾಣಿ ಗಾಯಾಳು ಪಾದಗಳು

ಹಿಮ ಹಾಗೂ ಕೆಸರು ಸೇರಿ ನೋವಿಗೀಡಾಗಿವೆ

ಮನುಷ ತನ್ನ ಕುರುಡುತನದಲ್ಲಿ ಕಾಣದಾಗಿದ್ದಾನೆ

ನೀನು ಕಾಲೂರದಲ್ಲಿ ಅರಳುವ

ಬೆಳಕಿನ ಉಜ್ವಲ ಹೂಗುಚ್ಚಗಳನ್ನು;

ನಿನ್ನ ರಕ್ತಸೂಸುವ ಪಾದಬಿದ್ದಲ್ಲಿ

ಬೆಳೆಯುವ ಸುಗಂಧಿತ ಗೆಡ್ಡೆಹೂವುಗಳನ್ನು

ನೀನು ಹೇಗೋ ಬೀದಿಯಲ್ಲಿ

ನೇರವಾಗಿಯೇ ನಡೆಯುವೆ, ಮಗುವೇ

ದೋಷರಹಿತ ಧೈರ್ಯಶಾಲಿ

ಮಗುವಿನ ಪುಟಾಣಿ ಪಾದಗಳು

ನರಳಿರುವ ಸಣ್ಣ ಸಣ್ಣ ರತ್ನದ್ವಯಗಳು

ಅದು ಹೇಗೆ ಜನರು ಸಾಗಿದ್ದಾರೆ ಕಣ್ಣಿಗೇ ಹಾಕಿಕೊಳ್ಳದೇ!