ಫ್ರಾಂಝ್ ಕಾಫ್ಕಾ – ಕಾಯಿದೆಯ ಎದುರು


ಕನ್ನಡಕ್ಕೆ: ಕಮಲಾಕರ ಕಡವೆ

 

ಕಾಯಿದೆಯ ಎದುರು ಒಬ್ಬ ದ್ವಾರಪಾಲಕ. ಅವನ ಎದುರು ಒಬ್ಬ ಹಳ್ಳಿಮನಷ ಬರುತ್ತಾನೆ ಮತ್ತು ಕಾಯಿದೆಯ ಎದುರು ಹೋಗಲು ಅನುಮತಿ ಬೇಡುತ್ತಾನೆ. ಆದರೆ ದ್ವಾರಪಾಲಕ ತತ್ ಕ್ಷಣ ಒಳಹೋಗಲು ಅನುಮತಿ ನೀಡಲಾಗದು ಅನ್ನುತ್ತಾನೆ. ಆ ಹಳ್ಳಿಮನಷ ಕೊಂಚ ಯೋಚಿಸಿ, ಆ ಮೇಲೆ ಒಳಹೋಗಲಾದೀತೆ ಎಂದು ವಿಚಾರಿಸುತ್ತಾನೆ. “ಆದೀತು, ಆದರೆ ಈಗಲ್ಲ”, ಅನ್ನುತ್ತಾನೆ ದ್ವಾರಪಾಲಕ. ಬಾಗಿಲು ಎಂದಿನಂತೆ ತೆರೆದೇ ಇದ್ದದ್ದರಿಂದ, ದ್ವಾರಪಾಲಕ ಪಕ್ಕಕ್ಕೆ ಸರಿದಂತೇ, ಆ ಹಳ್ಳಿಮನಷ ಬಗ್ಗಿ ಒಳಗಿನತ್ತ ನೋಡುತ್ತಾನೆ. ಇದನ್ನು ಗಮನಿಸಿದ ದ್ವಾರಪಾಲಕ, ನಕ್ಕು ಅವನಿಗೆ ಹೇಳುತ್ತಾನೆ, “ನಿನಗೆ ಹಾಗನ್ನಿಸಿದರೆ ನನ್ನ ಮಾತಿಗೆ ಪ್ರತಿಯಾಗಿ ಒಳಹೋಗಲು ಪ್ರಯತ್ನ ಮಾಡು. ಆದರೆ ನೆನಪಿರಲಿ, ನಾನು ಬಲಿಷ್ಠನಿದ್ದೇನೆ. ಮತ್ತು ನಾನು ದ್ವಾರಪಾಲಕರುಗಳಲ್ಲೆಲ್ಲಾ ಅತಿ ಸಣ್ಣಗಿನವ. ಕೋಣೆಯಿಂದ ಕೋಣೆಗೆ ದ್ವಾರಪಾಲಕರು ಎದುರಾಗುತ್ತಾರೆ ಮತ್ತು ಒಬ್ಬೊಬ್ಬರೂ ಮೊದಲಿನವರಿಗಿಂತ ಹೆಚ್ಚು ಬಲಿಷ್ಠರು. ಮೂರನೇ ದ್ವಾರಪಾಲಕನವರೆಗೆ ತಲುಪಿದರೂ ಸಾಕು, ಆತ ಎಷ್ಟು ಭಯಾನಕನಿದ್ದಾನೆ ಎಂದರೆ, ನಾನೂ ಸಹ ಅವನನ್ನು ಕಣ್ಣೆತ್ತಿ ನೋಡಲು ಹೆದರುತ್ತೇನೆ.” ಈ ಬಗೆಯ ತಡೆಗಳನ್ನು ಹಳ್ಳಿಮನಷ ಎಣಿಸಿರಲಿಲ್ಲ; ಕಾಯಿದೆ ಎಲ್ಲರಿಗೂ ಎಂದಿಗೂ ಎಟಕುವಂತಿರಬೇಕಲ್ಲವೇ ಎಂದುಕೊಳ್ಳುತ್ತಾನೆ ಆತ, ಆದರೆ ಈಗ ಕಡಕ್ಕು ಕೋಟು ತೊಟ್ಟು ಕೂತಿರುವ ಆ ದ್ವಾರಪಾಲಕನನ್ನ ಹತ್ತಿರದಿಂದ ನೋಡಿದಂತೆ, ಅವನ ಉದ್ದನ ಚೂಪು ಮೂಗು ಮತ್ತು ತೆಳ್ಳನ ಕಪ್ಪನೆಯ ನೀಳ ಗಡ್ಡವನ್ನು ನೋಡಿದಂತೆ, ಅನುಮತಿ ಸಿಗುವವರೆಗೆ ಕಾಯುವುದೇ ಲೇಸು ಎಂದು ನಿರ್ಧರಿಸುತ್ತಾನೆ. ದ್ವಾರಪಾಲಕ ಅವನಿಗೆ ಒಂದು ಕುರ್ಚಿ ಕೊಟ್ಟು ಬಾಗಿಲ ಬದಿಯಲ್ಲಿ ಕೂರಗೊಡುತ್ತಾನೆ. ಅಲ್ಲಿ ಅವನು ದಿನಾನುದಿನ ವರ್ಷಗಳಕಾಲ ಕೂತಿರುತ್ತಾನೆ. ಬಹಳ ಸಲ ಅವನು ಒಳಹೋಗಲು ಪ್ರಯತ್ನ ಮಾಡುತ್ತಾನೆ, ದ್ವಾರಪಾಲಕನಿಗೆ ಬೇಡಿ ಬೇಡಿ ಕಾಡುತ್ತಾನೆ. ಅವನೊಡನೆ ಆಗೀಗ ದ್ವಾರಪಾಲಕ ಚಿಕ್ಕಪುಟ್ಟ ಸಂಭಾಷಣೆ ನಡೆಸುತ್ತಾನೆ, ಅವನ ಮನೆ ಮತ್ತಿತರ ವಿಷಯ ವಿಚಾರಿಸುತ್ತಾನೆ. ಆದರೆ ಯಾವಾಗಲೂ ಅವು ನಿರಾಸಕ್ತ ಪ್ರಶ್ನೆಗಳಾಗಿರುತ್ತವೆ, ದೊಡ್ಡ ದೊಡ್ಡ ಸಾಹೇಬರುಗಳು ಕೇಳುವಂತೆ ಮತ್ತು ಯಾವಾಗಲೂ ಅವು ಒಳಹೋಗಲು ಅನುಮತಿ ಇಲ್ಲ ಅನ್ನುವಲ್ಲಿ ಕೊನೆಯಾಗುತ್ತವೆ. ಹಳ್ಳಿಮನಷ ತಾನು ಪ್ರಯಾಣನಿಮಿತ್ತ ಜತೆಗೆ ತಂದ ಏನೆಲ್ಲವನ್ನೂ ತ್ಯಾಗಮಾಡಿ ದ್ವಾರಪಾಲಕನಿಗೆ ಲಂಚವಾಗಿ ಕೊಡುತ್ತಾನೆ. ಪ್ರತಿ ಸಲವೂ ದ್ವಾರಪಾಲಕ ಅವುಗಳನ್ನು ಸ್ವೀಕರಿಸುತ್ತ ಹೇಳುತ್ತಾನೆ, “ಇವನ್ನೆಲ್ಲ ನಾನು ತೆಗೆದುಕೊಳ್ಳುತ್ತಿರುವುದೇಕೆಂದರೆ ನಿನಗೆ ಎಲ್ಲವನ್ನೂ ಮಾಡಿದ ತೃಪ್ತಿ ಇರಲಿ ಎನ್ನುವ ಮಾತ್ರಕ್ಕೆ.” ಎಷ್ಟೋ ವರ್ಷಗಳವರೆಗೆ ಸತತವಾಗಿ ಆ ಹಳ್ಳಿಮನಷ ದ್ವಾರಪಾಲಕನ ಮೇಲೆ ತನ್ನ ನೋಟ ನೆಡುತ್ತಾನೆ. ಅವನು ಇತರ ದ್ವಾರಪಾಲಕರನ್ನು ಮರೆಯುತ್ತಾನೆ, ಈ ಮೊದಲಿನವನೇ ಆತನಿಗೆ ಕಾಯಿದೆಯನ್ನು ತಲುಪಲು ತನಗಿರುವ ಏಕಾಕಿ ಕಂಟಕವಾಗಿ ಕಾಣುತ್ತಾನೆ. ಅವನು ತನ್ನ ದುರಾದೃಷ್ಟವನ್ನು ಹಳಿಯುತ್ತಾನೆ, ಮೊದಮೊದಲ ವರ್ಷಗಳಲ್ಲಿ ದೊಡ್ಡ ದನಿಯಲ್ಲಿ, ಆದರೆ ವಯಸ್ಸಾದಂತೆ ಒಳಗೊಳಗೇ ವಟವಟಗುಟ್ಟುತ್ತಾನೆ. ಮಕ್ಕಳಂತ್ತಾಡತೊಡಗುತ್ತಾನೆ. ಮತ್ತು, ದ್ವಾರಪಾಲಕನನ್ನು ಇಷ್ಟೆಲ್ಲ ವರ್ಷಗಳವರೆಗೆ ಸತತ ಧ್ಯಾನವಿಟ್ಟು ಕಾಣುತ್ತ ಕುಳಿತಿರುವ ಅವನಿಗೆ, ದ್ವಾರಪಾಲಕನ ಕೋಟಿನ ಕಾಲರಿನ ಮೇಲೆ ಕುಳಿತ ಹೇನು ಕೂಡ ಪರಿಚಯವಾಗಿಬಿಟ್ಟಿರುವುದರಿಂದ, ಆ ಹೇನುಗಳಿಗೂ ಮೊರೆ ಇಡುತ್ತಾನೆ ದ್ವಾರಪಾಲಕನ ಮನಪರಿವರ್ತನೆಗೆ ಬೇಡಿಕೊಂಡು. ಹೀಗೇ ಕಾಲ ಸರಿದು ಅವನ ದೃಷ್ಟಿಯೂ ಮಂಜಾಗತೊಡಗುತ್ತದೆ. ಅವನಿಗೆ ಜಗವೇ ಕರಾಳವಾಗುತ್ತಿದೆಯೇ ಅಥವಾ ತನ್ನ ಕಣ್ಣುಗಳೇ ಮೋಸಮಾಡುತ್ತಿವೆಯೇ ಅರಿವಿಗೆ ಬರುವುದಿಲ್ಲ. ಹಾಗಿದ್ದೂ ಅಂಧಕಾರದಲ್ಲಿ ಮುಳುಗಿದ್ದಾತನಿಗೆ ಸದಾ ತೆರೆದಿರುತ್ತಿದ್ದ ಕಾಯಿದೆಯ ಬಾಗಿಲೆಡೆಯಿಂದ ಎಡೆಬಿಡದೇ ಸೂಸುತ್ತಿರುವ ಪ್ರಭೆಯೊಂದು ಅರಿವಿಗೆ ಬರುತ್ತದೆ. ವಯಸ್ಸು ತುಂಬಿಬಂದಿರುವ ಅವನಿಗಿನ್ನು ಹೆಚ್ಚು ಬಾಳು ಉಳಿದಿಲ್ಲ.  ಸಾಯುವ ಮೊದಲು, ಅವನ ಈವರೆಗಿನ ಎಲ್ಲ ಕಟು ಅನುಭವಗಳೂ ಒಟ್ಟಾಗಿ ಅವನ ಒಳಗಿನಿಂದ ಇಲ್ಲಿಯವರೆಗೆಂದೆಂದೂ ಕೇಳಿರದ ಒಂದು ಪ್ರಶ್ನೆಯನ್ನು ಎತ್ತುತ್ತವೆ. ಸ್ವತಃ ಏಳಲೂ ಆಗದ ಸ್ಥಿತಿಯಲ್ಲಿರುವ ಅವನು ಕೈಬೀಸಿ ದ್ವಾರಪಾಲಕನನ್ನು ಬಳಿಗೆ ಕರೆಯುತ್ತಾನೆ. ಹಳ್ಳಿಮನಷನ ಆಕೃತಿಯೂ ಕುಬ್ಜವಾಗಿಬಿಟ್ಟಿರುವುದರಿಂದ ಅವನ ಮಾತನ್ನು ಕೇಳಲು ದ್ವಾರಪಾಲಕ ಬಗ್ಗಬೇಕಾಗುತ್ತದೆ. “ಈಗೇನು ಕೇಳಬೇಕಾಗಿ ಬಂದಿದೆ ನಿನಗೆ”, ದ್ವಾರಪಾಲಕ ಸಿಡಿಮಿಡಿ ಮಾಡುತ್ತಾನೆ, “ಸಮಾಧಾನವೇ ಇಲ್ಲವಲ್ಲ ನಿನಗೆ”. “ಎಲ್ಲರಿಗೂ ಕಾಯಿದೆಯ ಫಾಯಿದೆ ಬೇಕಾಗಿಯೇ ಇರುತ್ತದಾದರೂ, ಇಷ್ಟೆಲ್ಲ ವರ್ಷಗಳಲ್ಲಿ ನನ್ನನುಳಿದು ಬೇರೆ ಯಾರೂ ಕೂಡ ಒಳಹೋಗಲೆಂದು ಬೇಡಿಕೊಂಡು ಈ ಬಾಗಿಲ ಬಳಿ ಬರಲಿಲ್ಲವಲ್ಲ, ಯಾಕೆ?” ಎಂದು ಕೇಳುತ್ತಾನೆ ಆ ಹಳ್ಳಿಮನಷ. ಅವನ ಕೊನೆ ಘಳಿಗೆ ಬಂದಿರುವುದನ್ನ ಅರಿತ ದ್ವಾರಪಾಲಕ, ಇಂದ್ರಿಯಗಳೆಲ್ಲ ಜಡವಾಗುತ್ತಿರುವ ಅವನ ಕಿವಿಯ ಬಳಿ ಜೋರಾಗಿ ಕಿರುಚುತ್ತಾನೆ, “ಬೇರೆ ಯಾರೂ ಈ ಬಾಗಿಲ ಮೂಲಕ ಒಳಹೋಗುವಂತಿರಲಿಲ್ಲ, ಏಕೆಂದರೆ ಇದು ನಿನಗೊಬ್ಬನಿಗಾಗಿಯೇ ಮಾಡಿದ್ದ ಬಾಗಿಲಾಗಿತ್ತು. ಇನ್ನು ನಾನು ಈ ಬಾಗಿಲನ್ನು ಮುಚ್ಚುತ್ತೇನೆ”.

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s