ಹೊಳೆಯಿಲ್ಲ ಬೆಳೆಯಿಲ್ಲ ಸಾಗರವೂ ಬಹುದೂರ
ಗುಡ್ಡಗಳೇ ಕ್ಷಿತಿಜವು ಎಲ್ಲ ಕಡೆಗೆ
ದಿಕ್ಕುಗಳು ನೆರೆಬಂದು ದುಂಡಗೆ ಮೈಚೆಲ್ಲಿ
ನೋಡನಿಂತಿವೆ ಉರಿಶಿಶ್ನದೆಡೆಗೆ
ಕಾಲವೆನ್ನುವೆಯೋ ನಿರಾಕಾರವೆನ್ನುವೆಯೋ
ಸಮ್ರಾಟ ಬಯಸಿದ ಉನ್ಮತ್ತ ಸ್ಥಿತಿಯೋ
ಮೂಲದಲಿ ಮಾನವನ ಕಾಲಡಿಯ ಹಾದಿ
ಏರಿದರೆ ಏರುವೀ ಏರಿ ದೇವಗಿರಿಯೋ
ಹಳ್ಳಿಹೊಲಗಳು ಬಂಜೆ ಕಲ್ಲುಬಯಲುಗಳು ಸುತ್ತ
ಉಬ್ಬಸದ ಹೆದ್ದಾರಿ ಹಿಡಿದು ಔರಂಗಾಬಾದು
ಅಲ್ಲಿಂದ ಮುಂದುಂಟು ಎಲ್ಲೋರಾ, ಅಜಂಠಾ
ವಿಪರೀತಗಳ ನಡುವೆ ಇದು ದಿವ್ಯ ಬೀಡು
ನೋಟ ನಿಲುಕದು, ಮಾಟ ನಿಲುಕದು, ಮಾತಿಗೋ ಇಲ್ಲೆಇಲ್ಲ
ಹತ್ತಿ ದುರ್ಗಮ ಕೋಟೆ ಕಾಲು ಕಂಗಾಲು
ಅವಶೇಷಗಳನು ಬಿಟ್ಟು ಮುಂದೆನಡೆದು ನೋಡಿದರೆ
ಅಡಿಯ ಕಂದಕದಿಂದೆದ್ದ ಗೋಡೆ ಕಡೆದಿಟ್ಟ ಕಲ್ಲು
ಬಿಲ್ಲೆ ಮೇಲಿನ ಮೊಹರು ಕತ್ತಿಅಲುಗಿನ ಸೃಷ್ಟಿ
ರಕ್ತಚಿತ್ರಗಳ ರಹದಾರಿ ತಂದಿತಿಲ್ಲಿಗೆ ದಿಲ್ಲಿ
ಕ್ರೂರ ಮಹಾಮತಿ ತನ್ನ ಹೊಸ ತರ್ಕ ಹೆಣೆದಂತೆ
ಹುಟ್ಟಿತಿಲ್ಲಿ ಮಸಣರೂಪದ ಅವನ ರಾಜಧಾನಿ
ತಾರೆಸಂಕುಲ ತಂದು ಸಾಮ್ರಾಜ್ಯ ಸಿಂಗರಿಸಿ
ಇತಿಹಾಸದಲಿ ನೆಲೆಸಿರುವ ರಮ್ಯ ಬಿಂದು
ಮುಠ್ಠಾಳ ತುಘಲಕನ ಅತಿಬುದ್ದಿಯ ಕಥೆ
ಹುಚ್ಚು ಕನಸಿನ ತುಣುಕು ದೌಲತಾಬಾದು
— ಕಮಲಾಕರ ಕಡವೆ (ಚೂರುಪಾರು ರೇಷಮೆ)

