ಪುಟ್ಟ ಪಾದಗಳು
ಮಗುವೊಂದರ ಪುಟ್ಟ ಪಾದಗಳು
ನೀಲಿ, ಥಂಡಿಯಿಂದ ನೀಲಿಯಾಗಿವೆ;
ಹೇಗವರು ನಿನ್ನನ್ನು ಕಂಡರೂ ರಕ್ಷಿಸದೇ ಇರುವರು,
ಓ ದೇವರೇ!
ಕಲ್ಲು ಹರಳುಗಳಿಂದ ಎಲ್ಲೆಡೆ ಚುಚ್ಚಿಕೊಂಡ
ಪುಟಾಣಿ ಗಾಯಾಳು ಪಾದಗಳು
ಹಿಮ ಹಾಗೂ ಕೆಸರಿಂದ ನೋವಿಗೀಡಾಗಿವೆ.
ಮನುಷ್ಯ ತನ್ನ ಕುರುಡುತನದಲ್ಲಿ ಕಡೆಗಣಿಸಿದ್ದಾನೆ
ನೀನು ಕಾಲೂರಿದಲ್ಲಿ ಅರಳುವ
ಬೆಳಕಿನ ಉಜ್ವಲ ಹೂಗುಚ್ಚಗಳನ್ನು;
ನಿನ್ನ ರಕ್ತಸೂಸುವ ಪಾದಬಿದ್ದಲ್ಲಿ
ಸುಗಂಧಿತ ಗೆಡ್ಡೆಹೂವುಗಳು ಬೆಳೆಯುತ್ತವೆಂಬುದನ್ನು.
ನೀನು ಹೇಗೂ ಬೀದಿಗಳಲ್ಲಿ
ನೇರವಾಗಿಯೇ ನಡೆಯುವುದರಿಂದ
ನೀನು ನಿರ್ದೋಷಿ, ಧೈರ್ಯಶಾಲಿ.
ಮಗುವಿನ ಪುಟಾಣಿ ಪಾದಗಳು;
ನರಳಿರುವ ಸಣ್ಣ ರತ್ನದ್ವಯಗಳು;
ಅದು ಹೇಗೆ ಜನರು ಸಾಗಿದ್ದಾರೆ ಕಣ್ಣಿಗೇ ಹಾಕಿಕೊಳ್ಳದೇ!